ಮಾತನಾಡ್ತಾ ಊಟ ಮಾಡುವಾಗ ಮಾತನಾಡಬೇಡಿ, ಸುಮ್ಮನೆ ಕುಳಿತು ಊಟ ಮಾಡಿ ಎಂದು ಹಿರಿಯರು ಗದರಿಸುವುದನ್ನು, ಬುದ್ಧಿಮಾತು ಹೇಳೋದನ್ನು ಕೇಳಿರುತ್ತೀರಿ. ಅಷ್ಟಕ್ಕೂ ಊಟ ಮಾಡುವಾಗ ಮಾತನಾಡಬಾರದು ಎಂದು ಹೇಳೋದು ಯಾಕೆ? ಹಿಂದಿನ ಕಾರಣವೇನು ನಿಮಗೆ ಗೊತ್ತಾ?
ಊಟ ಮಾಡುವಾಗ, ನಮ್ಮ ಬಾಯಿಯಲ್ಲಿರುವ ಲಾಲಾರಸವು ಆಹಾರದೊಂದಿಗೆ ಬೆರೆತು, ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಊಟ ಮಾಡುವಾಗ ಮಾತನಾಡಿದರೆ, ಆಹಾರದ ಜೊತೆಗೆ ಗಾಳಿಯೂ ನಮ್ಮ ಹೊಟ್ಟೆಯ ಒಳಗೆ ಹೋಗುತ್ತದೆ. ಇದರಿಂದಾಗಿ ನಮ್ಮ ಜೀರ್ಣಕ್ರಿಯೆ ಪ್ರಕ್ರಿಯೆಗೆ ತೊಂದರೆಯಾಗುತ್ತದೆ.
ಅನೇಕರಿಗೆ ಊಟ ಮಾಡುವಾಗ ಮಾತನಾಡುವ ಅಭ್ಯಾಸ ಕೂಡಾ ಇದೆ. ಹೀಗೆ ಊಟ ಮಾಡುತ್ತಾ, ಮಾತನಾಡಿದರೆ ತಿಂದ ಆಹಾರ ಗಂಟಲಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ.
ತಿನ್ನುವಾಗ ಮಾತನಾಡಿದರೆ ಆಹಾರದ ಚಿಕ್ಕ ಚಿಕ್ಕ ಕಣಗಳು, ಎಂಜಲು ಇತರರ ಮೇಲೆ ಬೀಳುವ ಹಾಗೂ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಇತರರಿಗೂ ಹರಡುವ ಸಾಧ್ಯತೆ ಇರುತ್ತದೆ.
ನಾವು ಪ್ರತಿನಿತ್ಯ ಸೇವಿಸುವ ಆಹಾರವನ್ನು ದೇವರ ಪ್ರಸಾದ ಎಂದು ಪರಿಗಣಿಸಲಾಗುತ್ತದೆ. ಊಟ ಮಾಡುವಾಗ ಮಾತನಾಡಿದರೆ ಅದು ದೇವರಿಗೆ ಅವಮಾನ ಮಾಡಿದಂತೆ ಎಂದು ನಂಬಲಾಗುತ್ತದೆ. ಹಾಗಾಗಿ ಊಟ ಮಾಡುವಾಗ ಮಾತನಾಡಬಾರದು ಎಂದು ಹೇಳಲಾಗುತ್ತದೆ.