ಪುರಿಯ ಜಗನ್ನಾಥ ದೇವಾಲಯವು ಎಷ್ಟು ಪ್ರಸಿದ್ಧವಾಗಿದೆಯೋ ಅಷ್ಟೇ ನಿಗೂಢತೆಯೂ ಸಹ ಇದೆ. ಈ ದೇವಾಲಯಕ್ಕೆ ಸಂಬಂಧಿಸಿದ ಹಲವಾರು ಅರ್ಥಮಾಡಿಕೊಳ್ಳಲಾಗದ ಕತೆಗಳು ಮತ್ತು ಸಂಪ್ರದಾಯಗಳು ಇವೆ. ಅಂತಹದೇ ಒಂದು ವಿಶಿಷ್ಟ ನಂಬಿಕೆ, ಅವಿವಾಹಿತ ಜೋಡಿಗಳು ಈ ದೇವಾಲಯಕ್ಕೆ ಪ್ರವೇಶಿಸಬಾರದು ಎಂದು.
ಈ ನಿಯಮದ ಹಿಂದೆ ಒಂದು ಪೌರಾಣಿಕ ಕಥೆ ಇರುವದು ಗಮನಾರ್ಹ. ಪ್ರಾಚೀನ ದಂತಕಥೆಯ ಪ್ರಕಾರ, ರಾಧೆ ಒಮ್ಮೆ ಜಗನ್ನಾಥ ದೇವಾಲಯಕ್ಕೆ ಬಂದು ಶ್ರೀಕೃಷ್ಣನ ಜಗನ್ನಾಥ ರೂಪವನ್ನು ನೋಡುವ ಇಚ್ಛೆ ವ್ಯಕ್ತಪಡಿಸಿದಳು. ಆದರೆ ಅರ್ಚಕರು ಅವಳನ್ನು ದೇವಾಲಯದ ಒಳಗೆ ಪ್ರವೇಶಿಸಲು ಅನುಮತಿಸದೆ ತಡೆಯುತ್ತಾರೆ. ಕಾರಣ ಕೇಳಿದಾಗ, ಅರ್ಚಕರು “ನೀನು ಶ್ರೀಕೃಷ್ಣನ ಪ್ರೇಮಿ ಮಾತ್ರ, ವಿವಾಹಿತೆ ಅಲ್ಲ” ಎಂದು ಉತ್ತರಿಸುತ್ತಾರೆ. ಇದರಿಂದ ಕೋಪಗೊಂಡ ರಾಧೆ ದೇವಾಲಯಕ್ಕೆ ಶಾಪ ಹಾಕಿದಳು – ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡುವ ಯಾವುದೇ ಅವಿವಾಹಿತ ಜೋಡಿ ತಮ್ಮ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ, ಅವರಿಗೆ ಸಂಗಾತಿಯಾಗಿ ಬಾಳಲು ಸಾಧ್ಯವಾಗದು ಎಂದು.
ಈ ಕಾರಣದಿಂದ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ಅವಿವಾಹಿತ ಜೋಡಿಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂಬ ನಂಬಿಕೆ ಇಂದು ಸಹ ಭಕ್ತರಲ್ಲಿ ಇದೆ.
ಜಗನ್ನಾಥ ದೇವಾಲಯದಲ್ಲಿ ಇದೇ ಜೂನ್ 26ರಿಂದ ಜಗನ್ನಾಥ ರಥಯಾತ್ರೆ ಆರಂಭವಾಗಲಿದೆ. 10 ದಿನಗಳ ಕಾಲ ನಡೆಯಲಿರುವ ಈ ಯಾತ್ರೆಯಲ್ಲಿ ಭಾಗವಹಿಸಲು ದೇಶದ ಪ್ರತಿಯೊಂದು ರಾಜ್ಯದಿಂದ, ವಿದೇಶಗಳಿಂದಲೂ ಸಾವಿರಾರು ಭಕ್ತರು ಪುರಿಗೆ ಆಗಮಿಸುತ್ತಾರೆ. ಜಗನ್ನಾಥ ರಥಯಾತ್ರೆಯಲ್ಲಿ ಪಾಲ್ಗೊಳ್ಳುವುದು 100 ಯಾಗಗಳನ್ನು ಮಾಡಿದಷ್ಟು ಪುಣ್ಯಫಲವನ್ನು ಸಿಗುತ್ತದೆ ಎಂಬುದು ಭಕ್ತರಲ್ಲಿ ಇರುವ ಧಾರ್ಮಿಕ ನಂಬಿಕೆ.
ಹಿಂದು ಪಂಚಾಂಗ ಪ್ರಕಾರ, ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯಂದು ಈ ಯಾತ್ರೆ ಪ್ರಾರಂಭವಾಗುತ್ತದೆ. ಈ ಬಾರಿ ಅದು ಜೂನ್ 26, 2025 ರಂದು ಮಧ್ಯಾಹ್ನ 1:25ಕ್ಕೆ ಆರಂಭವಾಗಲಿದ್ದು, ಜುಲೈ 5ರಂದು ಮುಕ್ತಾಯವಾಗಲಿದೆ. ಈ ಸಂದರ್ಭದಲ್ಲಿ ಜಗನ್ನಾಥ ದೇವರು ತಮ್ಮ ಸಹೋದರ ಬಲಭದ್ರ ಹಾಗೂ ಸಹೋದರಿ ಸುಭದ್ರರೊಂದಿಗೆ ರಥದಲ್ಲಿ ಪ್ರಯಾಣಿಸಿ ಗುಂಡಿಚಾ ದೇವಾಲಯಕ್ಕೆ ಭೇಟಿ ನೀಡುತ್ತಾರೆ.