ಹಿಂದು ಪುರಾಣದಲ್ಲಿ ಅನೇಕ ದೇವತೆಗಳಿಗೆ ತಮ್ಮದೇ ಆದ ಶಕ್ತಿ ಸಾಮರ್ಥ್ಯಗಳಿವೆ. ಜೊತೆಗೆ ವಿಶಿಷ್ಟವಾದ ವಾದ್ಯ, ವಾಹನಗಳು ಹಾಗೂ ಅಸ್ತ್ರಗಳಿವೆ. ಇವತ್ತು ನಾವು ಶ್ರೀ ಕೃಷ್ಣ ಪರಮಾತ್ಮನ ಕೈಯಲ್ಲಿರುವ ಕೊಳಲಿನ ಬಗ್ಗೆ ತಿಳಿದುಕೊಳ್ಳೋಣ.
ಶ್ರೀ ಕೃಷ್ಣ ವಿಷ್ಣುವಿನ ಅವತಾರ. ಧರ್ಮ ರಕ್ಷಣೆಗೆ ಜನಿಸಿದ ವಿಷ್ಣು ಸ್ವರೂಪಿ ಕೃಷ್ಣನನ್ನ ಭೇಟಿ ಮಾಡಲು ಎಲ್ಲಾ ದೇವತೆಗಳು ವೃಂದಾವನಕ್ಕೆ ಬರುತ್ತಿದ್ದರಂತೆ. ಪರಶಿವನು ಕೂಡ ವಿಷ್ಣುವಿನ ಭೇಟಿ ವೇಳೆ ವಿಶೇಷ ಉಡುಗೊರೆ ನೀಡಲು ನಿರ್ಧರಿಸಿದರಂತೆ. ಈ ವೇಳೆ ಕೃಷ್ಣ ಸದಾ ಜೊತೆಯಲ್ಲಿ ಇಟ್ಟುಕೊಳ್ಳಬಹುದಾದ ಪ್ರಿಯವಾದ ಉಡುಗೊರೆ ನೀಡಬೇಕು ಎಂದು ಶಿವ ಕೊಳಲನ್ನು ನೀಡಿದರಂತೆ ಎಂದು ಪುರಾಣಗಳು ಹೇಳುತ್ತವೆ.
ಕೊಳಲಿನ ಮೂಲಕ ಸುಶ್ರಾವ್ಯ ನಾದ ಮಾತ್ರವಲ್ಲದೇ ಅದು ಧರ್ಮ ರಕ್ಷಣೆಯ ಪ್ರತೀಕವಾಗಿ ಇರಬೇಕು ಎಂದು ಶಿವ ನಿರ್ಧರಿಸಿದರಂತೆ. ಅಂತಹ ಕೊಳಲು ಹೇಗೆ ಮಾಡುವುದು ಎಂದು ಕೊಂಡಾಗ ಶಿವನು ತನ್ನ ಬಳಿ ಋಷಿ ದಧೀಚಿಯ ಮಹಾಶಕ್ತಿಯ ಅಸ್ಥಿಗಳನ್ನು ಇಟ್ಟುಕೊಂಡಿದ್ದನ್ನು ನೆನಪಿಸಿಕೊಳ್ಳುತ್ತಾರೆ.
ಋಷಿ ದಧೀಚಿ ಧರ್ಮದ ಸಲುವಾಗಿ ತನ್ನ ದೇಹವನ್ನು ತ್ಯಾಗ ಮಾಡಿದ್ದರು ಎಂದು ಹೇಳಲಾಗಿದೆ. ಈ ಮೂಳೆಗಳಿಂದ ವಿಶ್ವಕರ್ಮನು ಮೂರು ಬಿಲ್ಲುಗಳನ್ನು ಮಾಡಿದನು, ಮೊದಲ ಪಿನಾಕ, ಎರಡನೆಯ ಗಾಂಡೀವ ಮತ್ತು ಮೂರನೆಯ ಶಾರಂಗ.
ಭಗವಾನ್ ಶಿವನು ಕೂಡ ಋಷಿ ದಧೀಚಿ ಮೂಳೆಗಳನ್ನು ಪುಡಿಮಾಡಿ ಸುಂದರವಾದ ಕೊಳಲನ್ನು ಮಾಡಿದನು. ಶ್ರೀ ಕೃಷ್ಣನನ್ನು ಭೇಟಿಯಾಗಲು ಭೂಮಿಗೆ ಬಂದಾಗ, ಆ ಕೊಳಲನ್ನು ಶ್ರೀ ಕೃಷ್ಣನಿಗೆ ಉಡುಗೊರೆಯಾಗಿ ನೀಡಿ, ಆಶೀರ್ವದಿಸಿದರು.