April 29, 2026
Wednesday, April 29, 2026
spot_img

ತುಮಕೂರು ದಸರಾ ಸಮಿತಿಯಿಂದ ನಾಡ ಹಬ್ಬ: ಸಿದ್ಧಲಿಂಗ ಸ್ವಾಮೀಜಿಗಳಿಂದ ಪೂಜೆ

ಹೊಸದಿಗಂತ ವರದಿ ತುಮಕೂರು:

ತುಮಕೂರು ದಸರಾ ಸಮಿತಿ ಈ ತಿಂಗಳ 22ರಿಂದ 11 ದಿನಗಳ ಕಾಲ ನಗರದಲ್ಲಿ 35ನೇ ವರ್ಷದ ದಸರಾ ಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕೊನೆಯ ದಿನದ ಶಮೀ ಪೂಜೆಯನ್ನು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ನೆರವೇರಿಸಲಿದ್ದಾರೆ.

ಈ ಸಂಬಂಧ ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಡಾ.ಜೆ.ಲಕ್ಷ್ಮೀಕಾಂತ್, ಖಜಾಂಚಿ ಜಿ.ಎಸ್.ಬಸವರಾಜು, ಸಂಚಾಲಕ ಗೋವಿಂದರಾವ್, ಕಾರ್ಯದರ್ಶಿ ಕೆ.ಶಂಕರ್ ಉಪ್ಪಾರಹಳ್ಳಿ ಅವರು ಸಿದ್ಧಗಂಗಾ ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿ, ಶಮೀಪೂಜೆ ನೆರವೇರಿಸಲು ಶ್ರೀಗಳನ್ನು ಆಹ್ವಾನಿಸಿದರು.

ಶಮೀ ಪೂಜೆ ನೆರವೇರಿಸಲು ಸ್ವಾಮೀಜಿಗಳು ಸಮ್ಮತಿಸಿದರು. ಸೆಪ್ಟೆಂಬರ್ 22ರಿಂದ ತುಮಕೂರು ದಸರಾ ಸಮಿತಿಯ ಕಾರ್ಯಕ್ರಮಗಳು ಆರಂಭವಾಗಲಿವೆ. ಅಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಪೂಜೆ, ದುರ್ಗಾ ಹೋಮ, ಭೂಮಿ ಪೂಜೆ, ಧ್ವಜ ಪೂಜೆ ಹಮ್ಮಿಕೊಳ್ಳಲಾಗಿದೆ. 23ರಂದು ಪಾವಗಡದ ರಾಮಕೃಷ್ಣ ಸೇವಾಶ್ರಮದ ಡಾ.ಜಪಾನಂದ ಸ್ವಾಮೀಜಿ ದಸರಾ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಅಂದಿನಿಂದ ಪ್ರತಿದಿನ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

ಭಜನೆ, ರಂಗಗೀತೆ, ಜಾನಪದ ನೃತ್ಯ ವೈಭವ, ಯೋಗ ಸಂಭ್ರಮ, ನೃತ್ಯ ಸ್ಪರ್ಧೆ, ರಾಷ್ಟ್ರ ದೇವೋಭವ, ಗೀತ ವೈಭವ, ರಂಗವಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧೆಗಳ ಮೊದಲ ಮೂರು ಸ್ಥಾನಗಳ ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುತ್ತದೆ.

ಅಕ್ಟೋಬರ್ 2ರಂದು ಸಂಜೆ 4.30ಕ್ಕೆ ಸಿದ್ಧಲಿಂಗ ಸ್ವಾಮೀಜಿಯವರು ಶಮೀಪೂಜೆ ನೆರವೇರಿಸುವರು. ಪ್ರತಿದಿನದ ಕಾರ್ಯಕ್ರಮಗಳಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಅತಿಥಿಗಳಾಗಿ ಭಾಗವಹಿಸುವರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !