ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಅಬಕಾರಿ ಸಚಿವ ಕೆ. ಗೋಪಾಲಯ್ಯ ಇಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ವೃಷಭಾವತಿನಗರ ಹಾಗೂ ಕಾಮಾಕ್ಷಿಪಾಳ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಬಿಜೆಪಿ ರಾಜ್ಯಾಧ್ಯಾಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಕ್ಷೇತ್ರದ ಕಾರ್ಯಕರ್ತರು ಅವರಿಗೆ ಸಾಥ್ ನೀಡಿದರು.
ಮನೆ ಮನೆಗೆ ತೆರಳಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ ಮತಯಾಚಿಸಿದರು. ಈ ವೇಳೆ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಜಯಗಳಿಸಿ, ಸರ್ಕಾರವನ್ನು ನಾವೇ ರಚನೆ ಮಾಡಲಿದ್ದೇವೆ. ನನ್ನ ಮತದಾರರು ನನ್ನ ಪರವಾಗಿ ಇದ್ದಾರೆ. ಈ ಬಾರಿ ಕೇತ್ರದಲ್ಲಿ ಬಹುಮತದಿಂದ ಗೆದ್ದು ಬರುತ್ತೇನೆ ಎಂದು ಗೋಪಾಲಯ್ಯನವರು ಹೇಳಿದರು.
ಮತಯಾಚನೆ ವೇಳೆ ಅವರೊಂದಿಗೆ ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ. ನರೇಂದ್ರಬಾಬು, ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.