ಹೊಸ ದಿಗಂತ ವರದಿ, ಹಾವೇರಿ:
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ ಕಟೀಲು ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ರಾಜೀನಾಮೆ ವಿಚಾರ ಕಟೀಲ್ ಅವರಿಗೆ ಫೋನ್ ಮಾಡಿದ್ದೆ, ರಾಜೀನಾಮೆ ಕೊಡುತ್ತೇನೆ ಅಂತ ಹೇಳಿಲ್ಲ ಅಂದರು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿಲ್ಲ. ವಿಧಾನಸಭಾ ಚುನಾವಣೆ ಸೋಲಿನ ಹೊಣೆಯನ್ನು ರಾಜ್ಯಾಧ್ಯಕ್ಷನಾಗಿ ನಾನು ಮತ್ತು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಹೋರುತ್ತೇವೆ ಎಂದು ಕೇಂದ್ರದ ನಾಯಕರಿಗೆ ಹೇಳಿರುವುದಾಗಿ ನನಗೆ ತಿಳಿಸಿದ್ದಾರೆ. ರಾಜೀನಾಮೆ ಕೊಟ್ಟಿರುವುದು ಶುದ್ದ ಸುಳ್ಳ ಸುದ್ದಿ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಕುರಿತು ಕಾರ್ಯಕರ್ತರು ನಿರಾಸೆ ಆಗಬೇಕಿಲ್ಲ. ರಾಜ್ಯದಲ್ಲಿ ಏಳು ತಂಡಗಳಲ್ಲಿ ಪ್ರವಾಸ ಮಾಡ್ತಿದ್ದೇವೆ. ಜಿ.ಪಂ, ತಾ.ಪಂ, ಲೋಕಸಭಾ ಚುನಾವಣೆಗಳಲ್ಲಿ ಜಯ ಗಳಿಸುತ್ತೇವೆ. ಸಂಘಟನೆ ಬಳಸಿಕೊಂಡು ಚುನಾವಣೆ ಎದುರಿಸುತ್ತೇವೆ. ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಇಡುತ್ತೇವೆ. ವಿಶ್ವ ನಾಯಕ ನರೇಂದ್ರ ಮೋದಿ ನಾಯಕತ್ವ ಮುಂದೆ ಇಟ್ಟುಕೊಂಡು ಚುನಾವಣೆಯಲ್ಲಿ ಯಶಸ್ವಿ ಆಗುತ್ತೇವೆ ಎಂದರು.
ನಮ್ಮಲ್ಲಿ ಸಮಸ್ಯೆ ಇಲ್ಲ ಅಂತ ಅನ್ನಲ್ಲ, ನಮ್ಮ ತಪ್ಪುಗಳನ್ನು ಕೂತು ಬಗೆಹರಿಸಿಕೊಳ್ಳುತ್ತೇವೆ. ಜಗದೀಶ ಶೆಟ್ಟರ ಕಾಂಗ್ರೆಸ್ಸಿಗೆ ಹೋಗಿದ್ದಾರೆ. ಆ ಪಕ್ಷಾನೇ ಸತ್ತೋಗಿದೆ, ಉಸಿರಾಡೋಕೆ ಆಗಲ್ಲ, ಆ ಪಕ್ಷಕ್ಕೆ ಹೋದ ಮೇಲೆ ಜಗದೀಶ ಶೆಟ್ಟರ ಏನನ್ನಾದರೂ ಹೇಳಬೇಕಲ್ವಾ?, ಶೆಟ್ಟರ ಇರುವಾಗಲೂ ಚುನಾವಣೆ ಸೋತವಲ್ವಾ?. ನಮ್ಮನ್ನು ಸೋಲಿಸಿರೋ ಜನಾನೇ ಯಾಕೆ ಸೋಲಿಸಿದೆವು ಅಂತ ಈಗ ಪರಿತಪಿಸ್ತಿದ್ದಾರೆ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಸಿಎಂ ಬೊಮ್ಮಾಯಿ ಭೇಟಿ ಕುರಿತಾದ ಪ್ರಶ್ನೆಗೆ ಪ್ರತಿಕ್ರೀಯೆ ನೀಡಿ, ರಾಜಕಾರಣಿಗಳ ನಡುವೆ ಶಾಶ್ವತ ವೈರತ್ವ ಯಾವತ್ತೂ ಇರಲ್ಲ, ಶಾಶ್ವತ ಸ್ನೇಹವೂ ಇರಲ್ಲ ಇದು ಸ್ನೇಹಕ್ಕೆ ಹೊಡೆತ ಅಲ್ಲ. ಚುನಾವಣೆ ಸೋಲಿಗೆ ತಂದೆ-ತಾಯಿ ಯಾರೂ ಇರಲ್ಲ. ಗೆಲುವಿಗೆ ಒಬ್ಬನೇ ಅಪ್ಪ, ನಾನೇ ಅಂತಾರೆ. ನಮಗೆ ಸೋಲಾಗಿದೆ ಒಪ್ಪುತ್ತೇವೆ ಸೋಲಿಗೆ ಕಾರಣ ಏನು ಅಂತ ಚರ್ಚೆ ಮಾಡಿ ಮುಂದೆ ಗೆದ್ದೇ ಗೆಲ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರೊಕೆ ಮುಸ್ಲಿಂ ಸಮುದಾಯ ಕಾರಣ. ಮುಸ್ಲಿಂ ಸಮಾಜದಿಂದ ಇಂದು ಕಾಂಗ್ರೆಸ್ ಉಸಿರಾಡುತ್ತಿದೆ. ಹೇಳುವುದು ಜಾತ್ಯಾತೀತ ಪಕ್ಷ ಅಂತಾ. ಮಾಡುವುದು ಹಿಂದೂ ವಿರೋಧಿ ನೀತಿ. ಮುಸ್ಲಿಂ ಅವರ ಪರವಾಗಿ ಮುಸ್ಲಿಂ ಲೀಗ್ಕ್ಕಿಂತಲೂ ಹೆಚ್ಚಿನ ಆಸಕ್ತಿ ಕಾಂಗ್ರೆಸ್ನವರಿಗಿದೆ ದೇಶದಲ್ಲಿ ದೇವಾಲಯಗಳನ್ನು ಒಡೆದು ಮಸೀದಿ ಕಟ್ಟಿದ ಸ್ಥಳದಲ್ಲಿ. ಮಸೀದಿ ಒಡೆದು ದೇವಾಲಯ ಕಟ್ಟುವ ಕೆಲಸವನ್ನು ನಾವು ಮಾಡುತ್ತೆವೆ ಎಂದರು.