January22, 2026
Thursday, January 22, 2026
spot_img

ಸಿಎಂ ಪಟ್ಟಕ್ಕಾಗಿ ಮೈಸೂರಿನಲ್ಲಿ ನಮಾಜ್ ಅಸ್ತ್ರ: ಡಿಕೆಶಿ ಪರ ವಿಶೇಷ ಪ್ರಾರ್ಥನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿದ್ದ ಆಂತರಿಕ ಕದನಕ್ಕೆ ನಿನ್ನೆ ತಾತ್ಕಾಲಿಕ ವಿರಾಮ ಬಿದ್ದರೂ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಮುಖ್ಯಮಂತ್ರಿ ಆಗಬೇಕೆಂಬ ಕೂಗು ಮಾತ್ರ ಇನ್ನೂ ನಿಂತಿಲ್ಲ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯಾದ ಮೈಸೂರಿನಲ್ಲಿ ಈ ಧ್ವನಿ ಈಗ ಮತ್ತಷ್ಟು ತೀವ್ರಗೊಂಡಿದೆ.

ಈ ಬೆಳವಣಿಗೆಯ ಭಾಗವಾಗಿ, ಮೈಸೂರಿನಲ್ಲಿರುವ ಹಜರತ್ ಸಯ್ಯದ್ ಗಮನ್ ಷಾ ಖಾದ್ರಿ ದರ್ಗಾದಲ್ಲಿ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರು ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದವರು ಒಗ್ಗೂಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಏಕೈಕ ಬೇಡಿಕೆಯೊಂದಿಗೆ ಸಾಮೂಹಿಕವಾಗಿ ನಮಾಜ್ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಜಿಲ್ಲೆಯಲ್ಲೇ, ಅವರ ಸಂಪುಟದಲ್ಲಿ ಉಪಮುಖ್ಯಮಂತ್ರಿ ಆಗಿರುವ ಡಿ.ಕೆ. ಶಿವಕುಮಾರ್ ಪರವಾಗಿ ಈ ರೀತಿಯ ಧಾರ್ಮಿಕ ಮತ್ತು ರಾಜಕೀಯ ಬೆಂಬಲದ ಪ್ರದರ್ಶನ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಹೈಕಮಾಂಡ್ ಸೂಚನೆಯಿಂದ ಕುರ್ಚಿ ಕದನಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದ್ದರೂ, ಸಿಎಂ ಪಟ್ಟಕ್ಕಾಗಿರುವ ಆಕಾಂಕ್ಷೆಗಳು ಸದ್ಯಕ್ಕೆ ಶಮನಗೊಂಡಿಲ್ಲ ಎಂಬುದನ್ನು ಈ ಪ್ರಾರ್ಥನಾ ಸಭೆಗಳು ಸೂಚಿಸುತ್ತಿವೆ.

Must Read