ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಮೆಟ್ರೋ ನಿಲ್ದಾಣಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳ ಬಳಕೆಗೆ ವಿಧಿಸಿದ್ದ ಶುಲ್ಕವನ್ನು ರದ್ದುಗೊಳಿಸಿದೆ.
ಮೆಟ್ರೋ ನಿಲ್ದಾಣಗಳಲ್ಲಿನ ಶೌಚಾಲಯಗಳನ್ನು ಬಳಸುವುದಕ್ಕೆ ಶುಲ್ಕವನ್ನು ಸಂಗ್ರಹಿಸಲಾಗುವುದಿಲ್ಲ. ಈ ಶೌಚಾಲಯಗಳು ಸಾರ್ವಜನಿಕ ಬಳಕೆಗೆ ಉಚಿತವಾಗಿ ಮುಕ್ತವಾಗಿರಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ 12 ಮೆಟ್ರೋ ನಿಲ್ದಾಣಗಳಲ್ಲಿರುವ ಶೌಚಾಲಯಗಳ ಬಳಕೆಗೆ ಶುಲ್ಕ ವಿಧಿಸಿತ್ತು. ಇದಕ್ಕಾಗಿ ಲಾಭ ರಹಿತ ಸಂಘಟನೆಯಾದ ಸುಲಭ್ ಇಂಟರ್‌ನ್ಯಾಶನಲ್ ಜತೆ ಒಪ್ಪಂದ ಮಾಡಿಕೊಂಡಿತ್ತು.
ಇದಕ್ಕೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವ ಬಿಎಂಆರ್ ಸಿಎಲ್ ಸುಲಭ್ ಇಂಟರ್‌ನ್ಯಾಶನಲ್ ಜೊತೆಗಿನ ಒಪ್ಪಂದವನ್ನು ರದ್ದುಪಡಿಸಿದೆ.
ಕರ್ನಾಟಕದ ಸುಲಭ್ ಇಂಟರ್ನ್ಯಾಷನಲ್’ನ ನಿಯಂತ್ರಕ ಎಂ. ವಿಶ್ವನಾಥ್ ಮಾತನಾಡಿ, ಬಿಎಂಆರ್ಸಿಎಲ್ ಶೌಚಾಲಯಗಳ ಬಳಕೆಯ ಶುಲ್ಕವನ್ನು ಸಂಗ್ರಹಿಸುವುದಿಲ್ಲ ಎಂದು ಘೋಷಿಸಿದ್ದು, ಹೀಗಾಗಿ ನಾವು 12 ಮೆಟ್ರೋ ನಿಲ್ದಾಣಗಳಿಂದ ನಮ್ಮ ಕಾರ್ಮಿಕರನ್ನು ಹಿಂತೆಗೆದುಕೊಂಡಿದ್ದೇವೆಂದು ಹೇಳಿದರು.
ಬಿಎಂಆರ್ ಸಿಎಲ್ ನಡೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ವಕೀಲ ಟಿ. ನರಸಿಂಹ ಮೂರ್ತಿ ಮಾತನಾಡಿ, ಬಿಎಂಆರ್ಸಿಎಲ್ ಅಧಿಕಾರಿಗಳ ಈ ನಿರ್ಧಾರ ಸಂತಸ ತಂದಿದೆ. ಭವಿಷ್ಯದಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳುವುದ್ಕಕೂ ಮುನ್ನ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಬೇಕೆಂದು ಹೇಳಿದ್ದಾರೆ.