Friday, December 12, 2025

ನಮ್ಮ ಮೆಟ್ರೋ | ಪಿಂಕ್ ಲೈನ್‌ಗೆ ಮೊದಲ ಚಾಲಕರಹಿತ ರೈಲು ಅನಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಎಂಆರ್‌ಸಿಎಲ್ ಕಾರಿಡಾರ್‌ಗಳಿಗಾಗಿ ಅಭಿವೃದ್ಧಿಪಡಿಸಲಾದ ಚಾಲಕರಹಿತ ಮೆಟ್ರೋ ರೈಲುಗಳ ಮಾದರಿಯನ್ನು ಬಿಇಎಂಎಲ್ ಗುರುವಾರ ಬಿಡುಗಡೆ ಮಾಡಿದೆ. ಇದರೊಂದಿಗೆ ‘ನಮ್ಮ ಮೆಟ್ರೋ’ದ ಪಿಂಕ್ ಲೈನ್ ಯೋಜನೆಯು ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ.

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ 21 ಕಿ.ಮೀ ಮಾರ್ಗದಲ್ಲಿ ಸಂಚರಿಸಲಿರುವ ಮೊದಲ ಆರು ಬೋಗಿಗಳ(6-coach) ರೈಲು ಇಂದು ಅನಾವರಣಗೊಂಡಿದೆ. ಇದರಲ್ಲಿ ಬಹು ನಿರೀಕ್ಷಿತ ವಿಮಾನ ನಿಲ್ದಾಣ ಮಾರ್ಗವೂ ಸೇರಿದೆ.

ಪಿಂಕ್ ಲೈನ್‌ನ ಮೂಲಮಾದರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಜೆ ರವಿಶಂಕರ್ ಅವರು ಬಿಇಎಂಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್ ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ಅನಾವರಣಗೊಳಿಸಿದರು.

ಭಾರತೀಯ ಸಾರ್ವಜನಿಕ ವಲಯದ ಉದ್ದಿಮೆ ಬಿಇಎಂಎಲ್, ಈ ರೈಲನ್ನು ತಯಾರಿಸಿದ್ದು, ಒಟ್ಟು 3,177 ಕೋಟಿ ರೂಪಾಯಿ ವೆಚ್ಚದ ಒಪ್ಪಂದದಡಿ ಇದನ್ನು ಪೂರೈಸಲಾಗಿದೆ. ವಿಶೇಷವೆಂದರೆ, ಈ ರೈಲುಗಳು ಚಾಲಕರಹಿತ ತಂತ್ರಜ್ಞಾನವನ್ನು ಹೊಂದಿವೆ. ಆರಂಭಿಕ ಹಂತದಲ್ಲಿ ಚಾಲಕರ ನೆರವಿನೊಂದಿಗೆ (GoA-2) ಸೆಮಿ-ಆಟೋಮ್ಯಾಟಿಕ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ರೈಲುಗಳು, ಭವಿಷ್ಯದಲ್ಲಿ ಸಂಪೂರ್ಣ ಚಾಲಕರಹಿತ (GoA-4) ವ್ಯವಸ್ಥೆಗೆ ಬದಲಾಗುವ ಸಾಮರ್ಥ್ಯ ಹೊಂದಿವೆ.

error: Content is protected !!