ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಇಲ್ಲಿದೆ. ಆಗಸ್ಟ್ 21ರಂದು ನಮ್ಮ ಮೆಟ್ರೋದಲ್ಲಿ ಒನ್ ನೇಷನ್ ಒನ್ ಕಾರ್ಡ್ ಅನುಗುಣವಾಗಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ಗೆ ಚಾಲನೆ ಸಿಗಲಿದೆ. ಎನ್ಸಿಎಂಸಿ ಕಾರ್ಡ್ ಅನ್ನು ದೇಶದ ಎಲ್ಲ ಸಾರಿಗೆ, ಪೆಟ್ರೋಲ್ ಬಂಕ್, ಎಲ್ಲ ಮೆಟ್ರೋ ಸಾರಿಗೆ ಮತ್ತು ಮಾಲ್ಗಳಲ್ಲಿ ಬಳಸಬಹುದಾಗಿದೆ.
ಬೆಂಗಳೂರಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಆಗಸ್ಟ್ 21ರಿಂದ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಶಾಪಿಂಗ್ ಮತ್ತು ಪ್ರಯಾಣಕ್ಕೆ ಪ್ರತ್ಯೇಕ ಕಾರ್ಡ್ ಬಳಕೆಯನ್ನು ಇದು ಕಡಿಮೆ ಮಾಡಲಿದೆ. ಎನ್.ಸಿ.ಎಂ.ಸಿ. ಕಾರ್ಡ್ ಗಳಿಗೆ 50 ರೂಪಾಯಿ ದರವಿದ್ದು, ಸ್ಮಾರ್ಟ್ ಕಾರ್ಡ್ ರೀತಿಯಲ್ಲಿ ಪ್ರಯಾಣದ ಶೇಕಡ 5 ರಷ್ಟು ರಿಯಾಯಿತಿ ಕೂಡ ಸಿಗಲಿದೆ. ಈ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರ ಹಲವು ವರ್ಷಗಳ ಕನಸು ನನಸಾಗಲಿದೆ.
ಪ್ರಯಾಣಿಕರು ಕಾರ್ಡ್ ಪಡೆಯಲು nammametro.agsindia.com ವೆಬ್ಸೈಟ್ ಅಥವಾ BMRCL RBL Bank NCMC ಮೊಬೈಲ್ ಆಪ್ ನಲ್ಲಿ ಸ್ವಯಂ ನೋಂದಣಿ ಮಾಡಿಕೊಂಡು ನೋಂದಣಿ ಸಂಖ್ಯೆಯನ್ನು ಮೆಟ್ರೋ ಟಿಕೆಟ್ ಕೌಂಟರ್ ನಲ್ಲಿ ತೋರಿಸಬಹುದು. ಎನ್.ಸಿ.ಎಂ.ಸಿ. ಕಾರ್ಡ್ ಆರ್.ಬಿ.ಎಲ್. ಬ್ಯಾಂಕ್ ನ ಎಲ್ಲಾ ಶಾಖೆಗಳಲ್ಲೂ ಲಭ್ಯವಿರಲಿದೆ.