ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರಗಳ ನಡುವಿನ ಸಂಪರ್ಕವನ್ನು ಅಭಿವೃದ್ಧಿಪಡಿಸಲು ರೂಪಿಸಲಾಗಿರುವ ನಮೋ ಭಾರತ್ ರ್ಯಾಪಿಡೋ ರೈಲು ಸಂಚಾರ ಶೀಘ್ರದಲ್ಲೇ ಕರ್ನಾಟಕದಲ್ಲೂ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಹೇಳಿದರು.
ನಗರಕ್ಕೆ ಶನಿವಾರ ಭೇಟಿ ನೀಡಿದ ಅಶ್ವಿನಿ ವೈಷ್ಣವ್ ಅವರು, ದೇವನಹಳ್ಳಿ ರೈಲ್ವೆ ನಿಲ್ದಾಣದಿಂದ ಕಂಟೋನ್ಮೆಂಟ್ ರೈಲು ನಿಲ್ದಾಣದವರೆಗೆ ನಡೆಸಲಾಗುತ್ತಿರುವ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.
ಈ ವೇಳೆ ಕೇಂದ್ರ ಸಚಿವರಿಗೆ, ಕೇಂದ್ರ ರಾಜ್ಯ ಖಾತೆ ಸಚಿವ ವಿ ಸೋಮಣ್ಣ, ಸಂಸದ ಪಿಸಿ ಮೋಹನ್ ಮತ್ತು ರೈಲ್ವೆ ಅಧಿಕಾರಿಗಳು ಸಾಥ್ ನೀಡಿದ್ದರು.
ಕಾಮಗಾರಿ ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಶ್ವಿನಿ ವೈಷ್ಣವ್ ಅವರು, ನಗರಗಳ ನಡುವಿನ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಈ ಯೋಜನೆ ರೂಪಿಸಲಾಗಿದೆ. ಇದು ಒಂದು ನಗರದಿಂದ ಇನ್ನೊಂದು ನಗರಕ್ಕೆ ಅತ್ಯಂತ ವೇಗವಾಗಿ ಸಂಪರ್ಕ ಕಲ್ಪಿಸಲಿದೆ. 150ರಿಂದ200 ಕಿ.ಮೀ. ವ್ಯಾಪ್ತಿಯೊಳಗೆ ಈ ರೈಲುಗಳು ಸಂಚರಿಸಲಿವೆ. ಉದ್ಯೋಗ ಹಾಗೂ ಇತರೆ ಕೆಲಸಗಳಿಗಾಗಿ ತುಮಕೂರು, ಮೈಸೂರಿನಿಂದ ಬೆಂಗಳೂರಿಗೆ ಬರುವವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.