ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಶ್ರೀಕೃಷ್ಣನ ಮಠಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಪೂಜಾ, ಕೈಂಕರ್ಯಗಳಲ್ಲಿ ಭಾಗಿಯಾಗಿ ಶ್ರೀಕೃಷ್ಣನ ಆಶೀರ್ವಾದ ಪಡೆದುಕೊಂಡರು.
ಮಧ್ಯಾಹ್ನ 12 ಸುಮಾರಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತೀರ್ಥಮಂಟಪ ಅನಾವರಣದಲ್ಲಿ ಪಿಎಂ ಮೋದಿ ಭಾಗಿಯಾದರು. ಬಳಿಕ ಲಕ್ಷಕಂಠ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗಿಯಾದರು.
ಮಠಕ್ಕೆ ಬರುತ್ತಿದ್ದಂತೆಯೇ ಮಠಾಧೀಶರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು. ಈ ವೇಳೆ ಮಠದ ಪರಿಸರದಲ್ಲಿ ವೈದಿಕರಿಂದ ಉಪನಿಷತ್ತು, ವೇದ, ಗೀತೆ ಪಠಣ ನಡೆಯುತ್ತಿತ್ತು. ಪ್ರಧಾನಿ ಮೋದಿಯವರಿಗೆ ಕೃಷ್ಣದೇವರ ಪ್ರಸಾದ ವಿತರಣೆ ಮಾಡಲಾಯಿತು.
ನರೇಂದ್ರ ಮೋದಿ ಅವರಿಗೆ ಮಾಧ್ವ ಸಂಪ್ರದಾಯದ ತಿಲಕವನ್ನು ಇಡಲಾಯಿತು. ಪುತ್ತಿಗೆ ಶ್ರೀಗಳು ಅಂಗಾರಕ ಅಕ್ಷತೆಯನ್ನು ಇರಿಸಿದರು. ಹೋಮದ ಮಸಿಯಲ್ಲಿ ತಯಾರಿಸಿರುವ ವಿಶೇಷ ತಿಲಕವನ್ನು ಮೋದಿಗೆ ಇಟ್ಟರು.
ಭೋಜನ ಶಾಲೆಯ ಮುಖ್ಯ ಪ್ರಾಣ ದೇವರ ದರ್ಶನ ಮಾಡಿದರು. ಮಠದೊಳಗಿನ ವಿವಿಧ ಗುಡಿಗಳ ದರ್ಶನ ಮಾಡಿದರು. ನಂತರ ಮಠದಿಂದ ಗೀತಾ ಮಂದಿರ ಮೋದಿ ತೆರಳಿದರು. ಈ ವೇಳೆ ವಿವಿಧ ವಾದ್ಯಗಳನ್ನು ಕಲಾವಿದರು ಪ್ರದರ್ಶನ ಮಾಡಿದರು.
ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ನಮೋ ಚಾಲನೆ, ಲಕ್ಷಕಂಠ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗಿ

