Wednesday, November 5, 2025

ವಿಶ್ವ ಚಾಂಪಿಯನ್ನರ ಜೊತೆ ‘ನಮೋ’: ಆಟಗಾರ್ತಿಯರ ಜೊತೆ ಪ್ರಧಾನಿ ಮೋದಿ ಸಂವಾದ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮಹಿಳಾ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ದೆಹಲಿಯ 7 ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಭೇಟಿ ಮಾಡಿದರು.

ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಅವರ ತಂಡದ ಸದಸ್ಯರು ತಮ್ಮ ಐತಿಹಾಸಿಕ ವಿಜಯವನ್ನು ಆಚರಿಸಲು ಪ್ರಧಾನಿಯನ್ನು ಭೇಟಿಯಾದರು.

ನವೆಂಬರ್ 2 ರಂದು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್​ಗಳಿಂದ ಮಣಿಸಿದ್ದ ಭಾರತ ವನಿತಾ ಪಡೆ, 52 ವರ್ಷಗಳ ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು.

ಭಾರತದ ಸಿಂಹಿಣಿಯರ ಈ ಐತಿಹಾಸಿಕ ಸಾಧನೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ವಿಶ್ವಕಪ್ ಮುಗಿದ ಮೂರು ದಿನಗಳ ಬಳಿಕ ಮಹಿಳಾ ಪಡೆ, ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದೆ.

ಮೋದಿ ನಿವಾಸದಲ್ಲಿ ಆಟಗಾರ್ತಿಯರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದ್ದು, ಪ್ರಧಾನಿಯವರು ತಂಡದ ಎಲ್ಲಾ ಆಟಗಾರ್ತಿಯರೊಂದಿಗೆ ಸಂವಾದ ನಡೆಸಿದ್ದಾರೆ. ಇದೇ ವೇಳೆ ತಂಡದ ಎಲ್ಲಾ ಆಟಗಾರ್ತಿಯರ ಸಹಿ ಇರುವ ಜೆರ್ಸಿಯನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಲಾಗಿದೆ.

ಆಟಗಾರ್ತಿಯರೊಂದಿಗೆ ಸಂವಾದ ನಡೆಸಿರುವ ಮೋದಿ ಅವರು, ಇಡೀ ತಂಡದ ಹೋರಾಟಕ್ಕೆ ಮುಚ್ಚುಗೆ ವ್ಯಕ್ತಪಡಿಸಿದ್ದಾರೆ. ಸತತ ಮೂರು ಸೋಲುಗಳು, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್ ಇದೆಲ್ಲವನ್ನು ಮೆಟ್ಟಿ ನಿಂತು ವಿಶ್ವಕಪ್ ಎತ್ತಿಹಿಡಿದ ಮಹಿಳಾ ತಂಡದ ಸಾಧನೆಯನ್ನು ಮೋದಿ ಶ್ಲಾಘಿಸಿದರು.

‘ಸೋಲಿಗೆ ಹೆದರಬಾರದು ಎಂದು ನೀವು ತೋರಿಸಿದ್ದೀರಿ. 2017 ರಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ನನ್ನನ್ನು ಭೇಟಿಯಾಗಿದ್ದರು. ಆದರೆ ಆಗ ಟ್ರೋಫಿ ಇರಲಿಲ್ಲ. ಇದೀಗ ಟ್ರೋಫಿಯೊಂದಿಗೆ ಭೇಟಿಯಾಗಿದ್ದಾರೆ ಎಂದರು. ಇದೇ ವೇಳೆ ಹರ್ಮನ್, ‘ನಾವು ಮತ್ತೆ ಭೇಟಿಯಾಗುತ್ತೇವೆ ಸರ್!’ ಎಂದರು. ಇದಕ್ಕೆ ಪ್ರಧಾನಿ ನಕ್ಕರು ಮತ್ತು ಎಲ್ಲರೂ ಚಪ್ಪಾಳೆ ತಟ್ಟಿದರು.

ಇದೇ ವೇಳೆ ಮಾತನಾಡಿದ ಸ್ಮೃತಿ ಮಂಧಾನ, ಪ್ರಧಾನಿ ಸರ್ ನಮಗೆ ಪ್ರೇರಣೆ ನೀಡುತ್ತಾರೆ. ಇಂದು ಹುಡುಗಿಯರು ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ, ಇದೆಲ್ಲವೂ ನಿಮ್ಮಿಂದಲೇ’ ಎಂದರು. ಆ ಬಳಿಕ ಮಾತನಾಡಿದ ದೀಪ್ತಿ, ‘2017 ರಲ್ಲಿ ಪ್ರಧಾನಿ ಕಷ್ಟಪಟ್ಟು ಕೆಲಸ ಮಾಡಿ, ನಿಮ್ಮ ಕನಸುಗಳು ನನಸಾಗುತ್ತವೆ’ ಎಂದು ಹೇಳಿದ್ದರು. ಇಂದು ಆ ಕನಸು ನನಸಾಯಿತು’ ಎಂದರು.

error: Content is protected !!