ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ 14ನೇ ಸಚಿವ ಸಂಪುಟ ಸಭೆ ಇಂದು ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ನಡೆಯಲಿದೆ. ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆಗಾಗಿ ಅಂತಿಮ ಹಂತದ ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಖಾತೆ ಸಚಿವ ಡಾ.ಎಂ.ಸಿ.ಸುಧಾಕರ್ ಸೇರಿದಂತೆ ಸಚಿವ ಸಂಪುಟದ ಸಹೋದ್ಯಗಿಗಳು ಇಂದು ಬೆಳಿಗ್ಗೆ 11.40ಕ್ಕೆ ರಸ್ತೆ ಮೂಲಕ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗ್ರಾಮಕ್ಕೆ ಆಗಮಿಸಿ, ಗ್ರಾಮದಲ್ಲಿರುವ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
ಇನ್ನೂ ನಂದಿಗಿರಿಧಾಮದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಹಿನ್ನಲೆ ಗಿರಿಧಾಮದಲ್ಲಿರುವ ಕೆ.ಎಸ್.ಟಿ.ಡಿ.ಸಿ ಹೋಟಲ್ ಮಯೂರ ಸಭಾಂಗಣಕ್ಕೆ ಹೊಸ ಲುಕ್ ನೀಡಲಾಗಿದೆ.
ಸಚಿವರ ವಾಸ್ತವ್ಯ ಹಾಗೂ ವಿಶ್ರಾಂತಿಗೆ ಕೊಠಡಿಗಳನ್ನು 7 ಸ್ಟಾರ್ ಕೊಠಡಿಗಳನ್ನಾಗಿ ಆಧುನೀಕರಣಗೊಳಿಸಲಾಗಿದೆ. ಮತ್ತೊಂದೆಡೆ ಪೊಲಿಸರು ಭೋಗನಂದೀಶ್ವರ ದೇವಸ್ಥಾನ ಹಾಗೂ ನಂದಿಗಿರಿಧಾಮದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.