ಮಾದಕ ವಸ್ತುಗಳ ಮಾರಾಟ ಲಾಭದ ಹಣ ಕೋಮುಗಲಭೆ ಸೃಷ್ಟಿಗೆ ಬಳಕೆ: ತನಿಖೆ ವೇಳೆ ಸ್ಫೋಟಕ ವಿಚಾರಗಳು ಬಹಿರಂಗ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಭಾರತಕ್ಕೆ ಕಳ್ಳಮಾರ್ಗದಲ್ಲಿ ಪೂರೈಕೆಯಾಗುತ್ತಿರುವ ʼಮಾದಕ ವಸ್ತುಗಳ ಭಯೋತ್ಪಾದನೆಯ ಜಾಲವುʼ ಪಾಕ್‌ ಮತ್ತು ಅಫ್ಘಾನ್‌ ನಿಂದ ನಿಯಂತ್ರಣವಾಗುತ್ತಿದೆ. ಅದರಿಂದ ಸಿಗುವ ಲಾಭವನ್ನು ಭಾರತದಲ್ಲಿ ಕೋಮುಗಲಭೆ ನಡೆಸಲು ಬಳಸಿಕೊಳ್ಳಲಾಗುತ್ತದೆ ಎಂಬ ಸ್ಪೋಟಕ ಮಾಹಿತಿ ಮಾದಕವಸ್ತುಗಳ ಕಳ್ಳಸಾಗಣೆ ಕುರಿತ ತನಿಖೆಯಲ್ಲಿ ಬಯಲಾಗಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಳೆದ ಶುಕ್ರವಾರ ಭೋಗಲ್‌ನಿಂದ ಇಬ್ಬರು ಅಫ್ಘಾನಿಸ್ತಾನದ ವ್ಯಕ್ತಿಗಳು ಹಾಗೂ ಶಾಹೀನ್ ಬಾಗ್‌ನಿಂದ ಬಂಧಿಸಲ್ಪಟ್ಟ ವ್ಯಕ್ತಿ ನೀಡಿದ ಸುಳಿವಿನ ಮೇರೆಗೆ ಭಾನುವಾರ ದೆಹಲಿಯಲ್ಲಿ ಹವಾಲಾ ಆಪರೇಟರ್ ಒರ್ವನನ್ನು ಬಂಧಿಸಲಾಗಿತ್ತು.
ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ನಾವು ಅಫ್ಘಾನ್ ಮೆಡಿಕಲ್‌ ವೀಸಾದಲ್ಲಿ ಭಾರತಕ್ಕೆ ಬಂದಿದ್ದೇವೆ.‌ ಮಾದಕವಸ್ತುಗಳ ಇಡೀ ಜಾಲ ಅಫ್ಘಾನ್‌ ನಿಂದ ನಿಯಂತ್ರಣವಾಗುತ್ತಿದೆ. ಅಲ್ಲಿನ ನಿರ್ದೇಶನದ ಮೇರೆಗೆ ನಾವು ಭಾರತದಲ್ಲಿ ಮಾದಕ ವಸ್ತುಗಳ ಜಾಲವನ್ನು ವಿಸ್ತರಿಸುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.
ಈ ಡ್ರಗ್‌ ಜಾಲಗಳಿಗೆ ಪಾಕ್‌ ಸಂಪೂರ್ಣ ಸಹಕಾರವಿದೆ. ಅಫ್ಘಾನ್‌ ಗಡಿದಾಟಿ ಬರುವ ಡ್ರಗ್ಸ್‌ ಅನ್ನು ಪಾಕಿಸ್ತಾನವು ಭಾರತದೊಳಕ್ಕೆ ಕಳ್ಳಮಾರ್ಗಗಳಲ್ಲಿ ರವಾನಿಸುವ ಮೂಲಕ ಜಾಲಕ್ಕೆ ಬೆಂಗಾವಲಾಗಿ ನಿಂತಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಕಳೆದ ಎರಡು ತಿಂಗಳಲ್ಲಿ ಡ್ರಗ್ಸ್‌ ಮಾರಾಟ ಮಾಡಿದ್ದಕ್ಕೆ ನಮಗೆ 4 ಲಕ್ಷ ಸಂದಾಯ ಮಾಡಲಾಗಿದೆ. ಅಫ್ಘಾನಿಸ್ಥಾನದಿಂದ ಜಾಲದ ಕೈಸೇರುವ ಕಚ್ಚಾ ಡ್ರಗ್ಸ್‌ ಅನ್ನು ಸಂಸ್ಕರಣೆ ಮಾಡಿದ ಬಳಿಕ ಭಾರತದ ವಿವಿಧ ಭಾಗಗಳಿಗೆ ರವಾನಿಸಿ ಮಾರಾಟ ಮಾಡಲಾಗುತ್ತದೆ. ಅಲ್ಲಿಂದ ಸಿಗುವ ಹಣವನ್ನು ಹವಾಲಾ ಮೂಲಕ ದುಬೈಗೆ ರವಾನಿಸಲಾಗುತ್ತದೆ. ಈ ವರೆಗೆ ನಾನೊಬ್ಬನೇ ಡ್ರಗ್ಸ್‌ ಮಾರಾಟದಿಂದ 10 ಕೋಟಿ ಹಣವನ್ನು ಸಂಗ್ರಹಿಸಿ ದುಬೈಗೆ ಕಳುಹಿಸಿಕೊಟ್ಟಿದ್ದೇನೆ ಎಂದು ಶಾಹಿನ್‌ ಬಾಗ್‌ ನಲ್ಲಿ ಸೆರೆಸಿಕ್ಕ ಡ್ರಗ್‌ ಕೇಸ್‌ ಆರೋಪಿ ಬಾಯ್ಬಿಟ್ಟಿದ್ದಾನೆ.
ಡ್ರಗ್‌ ಮಾರಾಟದಿಂದ ಸಿಕ್ಕ ಒಟ್ಟು ಹಣದಲ್ಲಿ ಒಂದಂಶವಷ್ಟೇ ದುಬೈಗೆ ಹೋಗುತ್ತದೆ. ಉಳಿದ ಹಣ ಪಾಕ್‌ ಮೂಲಕ ಸ್ಲೀಪರ್‌ ಸೆಲ್‌ ಗಳಿಗೆ ರವಾನಿಸಲಾಗುತ್ತದೆ. ಅವರು ಈ ಹಣವನ್ನು ದೇಶದ ವಿವಿಧ ಭಾಗಗಳಲ್ಲಿ ಕೋಮುಗಲಭೆ ಸೃಷ್ಟಿಸಲು, ವಿಧ್ವಂಸಕ ಕೃತ್ಯಗಳಿಗೆ ಶಸ್ತ್ರಾಸ್ತ್ರ ಖರೀದಿಸಲು ಈ ಹಣವನ್ನು ಬಳಸಲಾಗುತ್ತದೆ ಎಂಬ ವಿಚಾರ ಎನ್‌ ಸಿಬಿ ತನಿಖೆಯಲ್ಲಿ ಬಯಲಾಗಿದೆ.
ಇತ್ತೀಚೆಗೆ ದೆಹಲಿಯ ಶಾಹಿನ್‌ ಬಾಗ್‌ ನಲ್ಲಿ ಮಾದಕವಸ್ತುಗಳ ಬೃಹತ್‌ ಜಾಲವನ್ನು ಅಧಿಕಾರಿಗಳು ಭೇದಿಸಿದ್ದರು. ಈ ವೇಳೆ 100 ಕೋಟಿಗೂ ಹೆಚ್ಚು ಮೌಲ್ಯದ 50 ಕೆಜಿಯಷ್ಟು ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!