ಹೊಸದಿಗಂತ ವರದಿ ಶಿವಮೊಗ್ಗ:
ಮಹಿಳಾ ಸಮನ್ವಯ ಕರ್ನಾಟಕ ದಕ್ಷಿಣ ಪ್ರಾಂತ ಶಿವಮೊಗ್ಗ ವಿಭಾಗ ಹಾಗೂ ವಿಕಾಸ ಟ್ರಸ್ಟ್ ಸಹಯೋಗದಲ್ಲಿ ನವೆಂಬರ್ 26 ರಂದು ನಗರದ ಶುಭಮಂಗಳ ಸಮುದಾಯ ‘ವನದಲ್ಲಿ ನಾರಿಶಕ್ತಿ ಸಂಗಮ-ಮಹಿಳಾ ಸಮ್ಮೇಳನ ಆಯೋಜಿಸಲಾಗಿದೆ.
ನಗರದಲ್ಲಿ ಇಂದು ಸಮ್ಮೇಳನದ ಶಿವಮೊಗ್ಗ ವಿಭಾಗ ಸಂಚಾಲಕಿ ವೀಣಾ ಸತೀಶ್ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 7.3 ಕ್ಕೆ ವಿನೋಬನಗರದ ಪೊಲೀಸ್ ಚೌಕಿಯಿಂದ ಶುಭ ಮಂಗಳ ಸಮುದಾಯ ಭವನವರೆಗೆ ಶೋಭಾಯಾತ್ರೆ ನಡೆಯಲಿದೆ. ಬಳಿಕ ಸ್ವಾತಂತ್ರ್ಯ ಪೂರ್ವದಲ್ಲಿ ಹೋರಾಟ ಮಾಡಿದ ವೀರ ಮಹಿಳೆಯರು ಮತ್ತು ಸ್ವಾತಂತ್ರ್ಯಾ ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರ ಚಿತ್ರ ಪ್ರದರ್ಶಿನಿ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.
ಬೆಳಿಗ್ಗೆ 10ಕ್ಕೆ ಕುಮುದಾ ಸುಶೀಲಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹೋರಾಟಗಾರ್ತಿ ಹಾಗೂ ಬರಹಗಾರ್ತಿ ಸೀನು ಜೋಸೆಫ್ ಹಾಗೂ ಡಾ.ಲಕ್ಷ್ಮೀ ಪ್ರಸಾದ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಮ್ಮೇಳನ ಆಯೋಜಿಸಲಾಗಿದೆ. ರಾಷ್ಟ್ರೀಯ ಚಿಂತನೆ, ಸಾಮಾಜಿಕ ಸಾಮರಸ್ಯ, ಮಹಿಳಾ ಸುರಕ್ಷೆ, ಗ್ರಾಮೀಣ, ಕೃಷಿ ಇತ್ಯಾದಿ ಸಂಗತಿಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದರು.