‘ದಿ ಕೇರಳ ಸ್ಟೋರಿ’ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ: ಕೇಂದ್ರ ಸರಕಾರದ ವಿರುದ್ಧ ಸಿಎಂ ಪಿಣರಾಯಿ ವಿಜಯನ್ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್;

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕೇಂದ್ರ ಸರ್ಕಾರವು ‘ದಿ ಕೇರಳ ಸ್ಟೋರಿ’ ಸಿನಿಮಾಗೆ ‘ಶ್ರೇಷ್ಠ ನಿರ್ದೇಶಕ’ ಮತ್ತು ‘ಶ್ರೇಷ್ಠ ಛಾಯಾಗ್ರಹಣ’ ಪ್ರಶಸ್ತಿಗಳನ್ನು ನೀಡಿದ್ದು, ಆದ್ರೆ ಕೇಂದ್ರದ ಈ ನಡೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ತೀವ್ರವಾಗಿ ಖಂಡಿಸಿದ್ದಾರೆ. ಈ ಚಿತ್ರವು ಕೇರಳದ ಚಿತ್ರಣವನ್ನು ಕೆಡಿಸುವ ಉದ್ದೇಶದಿಂದ ತಪ್ಪು ಮಾಹಿತಿಯನ್ನು ಹರಡುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಈ ನಿರ್ಧಾರವು ರಾಷ್ಟ್ರೀಯ ಪ್ರಶಸ್ತಿಗಳ ತೀರ್ಪುಗಾರರ ಸಮಿತಿಯಿಂದ ಸಂಘ ಪರಿವಾರದ ವಿಭಜನಕಾರಿ ಸಿದ್ಧಾಂತಕ್ಕೆ ಸಾಂಕೇತಿಕ ಬೆಂಬಲ ನೀಡಿದಂತಿದೆ ಎಂದು ಟೀಕಿಸಿದ್ದಾರೆ.

2023ರಲ್ಲಿ ಬಿಡುಗಡೆಯಾದ ಈ ಚಿತ್ರವು ಕೇರಳದಲ್ಲಿ ಬಲವಂತದ ಧಾರ್ಮಿಕ ಮತಾಂತರದ ಮೂಲಕ ಐಸಿಸ್ ಭಯೋತ್ಪಾದಕ ಸಂಘಟನೆಗೆ ಜನರನ್ನು ಸೇರ್ಪಡೆಗೊಳಿಸುವ ವಿವಾದಾತ್ಮಕ ವಿಷಯವನ್ನು ಚಿತ್ರಿಸುತ್ತದೆ.

ವಿಜಯನ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ಕೇರಳದ ಚಿತ್ರಣವನ್ನು ಕೆಡಿಸುವ ಮತ್ತು ಸಾಮುದಾಯಿಕ ದ್ವೇಷವನ್ನು ಬಿತ್ತುವ ಉದ್ದೇಶದಿಂದ ತಪ್ಪು ಮಾಹಿತಿಯನ್ನು ಹರಡುವ ಚಿತ್ರಕ್ಕೆ ಗೌರವ ನೀಡುವ ಮೂಲಕ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರರ ಸಮಿತಿಯು ಸಂಘ ಪರಿವಾರದ ವಿಭಜನಕಾರಿ ಧೋರಣೆಗೆ ಸಾಂಕೇತಿಕ ಸಮ್ಮತಿ ನೀಡಿದೆ’ ಎಂದು ಆರೋಪಿಸಿದ್ದಾರೆ.

ಕೇರಳವು ಯಾವಾಗಲೂ ಸಾಮರಸ್ಯ ಮತ್ತು ಸಾಮುದಾಯಿಕ ಶಕ್ತಿಗಳ ವಿರುದ್ಧದ ಪ್ರತಿರೋಧದ ಸಂಕೇತವಾಗಿದೆ . ಈ ನಿರ್ಧಾರವು ಕೇರಳಕ್ಕೆ ಮಾತ್ರವಲ್ಲ, ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವ ಎಲ್ಲರಿಗೂ ಅವಮಾನವಾಗಿದೆ ಎಂದಿದ್ದಾರೆ.’ಕೇರಳದ ಜನರಷ್ಟೇ ಅಲ್ಲ, ಸತ್ಯ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಎಲ್ಲರೂ ಈ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು’ ಎಂದು ಕರೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!