April 4, 2026
Saturday, April 4, 2026
spot_img

ನ್ಯಾಷನಲ್ ಕ್ರಶ್ ಈಗ ಗ್ಲೋಬಲ್ ಸ್ಟಾರ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ರಶ್ಮಿಕಾ ಹೊಸ ದಾಖಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ, ತನ್ನ ಪರಿಶ್ರಮ ಮತ್ತು ಪ್ರತಿಭೆಯಿಂದಲೇ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವವರು ನಟಿ ರಶ್ಮಿಕಾ ಮಂದಣ್ಣ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಸಕ್ರಿಯವಾಗಿರುವ ರಶ್ಮಿಕಾ ಖಾತೆಗೆ ಈಗ ಮತ್ತೊಂದು ಅಪರೂಪದ ಅಂತಾರಾಷ್ಟ್ರೀಯ ಸಾಧನೆ ಸೇರ್ಪಡೆಯಾಗಿದೆ.

ಜಪಾನ್‌ನಲ್ಲಿ ನಡೆಯಲಿರುವ ಅತ್ಯಂತ ಪ್ರತಿಷ್ಠಿತ ‘ಕ್ರಂಚೈರೋಲ್ ಅನಿಮೆ ಪ್ರಶಸ್ತಿ’ (Crunchyroll Anime Awards) ಪ್ರದಾನ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಅವರು ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಈ ವೇದಿಕೆಯಲ್ಲಿ ಸತತ ಎರಡನೇ ಬಾರಿ ಕಾಣಿಸಿಕೊಳ್ಳುತ್ತಿರುವ ಮೊದಲ ಭಾರತೀಯ ಚಿತ್ರನಟಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಮೇ 23 ರಂದು ಟೋಕಿಯೊದಲ್ಲಿ ನಡೆಯಲಿರುವ ಈ 10ನೇ ಆವೃತ್ತಿಯ ಸಮಾರಂಭದಲ್ಲಿ ಅವರು ಹಾಲಿವುಡ್ ಖ್ಯಾತನಾಮರೊಂದಿಗೆ ವಿಜೇತರಿಗೆ ಪ್ರಶಸ್ತಿ ವಿತರಿಸಲಿದ್ದಾರೆ.

‘ಪುಷ್ಪ’ ಚಿತ್ರದ ಶ್ರೀವಲ್ಲಿ ಪಾತ್ರದ ಮೂಲಕ ಜಪಾನ್ ಪ್ರೇಕ್ಷಕರ ಮನಗೆದ್ದಿರುವ ರಶ್ಮಿಕಾಗೆ ಅನಿಮೆ ಸಿನಿಮಾಗಳೆಂದರೆ ಪಂಚಪ್ರಾಣ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನಿಮೇಟೆಡ್ ಕಲೆಗೆ ಗೌರವ ನೀಡುವ ಈ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಅವರ ಅಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿದೆ.

ಇತ್ತೀಚೆಗಷ್ಟೇ ತೆಲುಗು ನಟ ವಿಜಯ್ ದೇವರಕೊಂಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ‘ತೆಲುಗು ಸೊಸೆ’ಯಾಗಿರುವ ರಶ್ಮಿಕಾ, ವೃತ್ತಿಜೀವನದಲ್ಲೂ ಅತ್ಯಂತ ಉತ್ತುಂಗದಲ್ಲಿದ್ದಾರೆ. ಅತ್ಯುತ್ತಮ ನಟಿಯಾಗಿ ‘ಗದ್ದರ್ ಚಲನಚಿತ್ರ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿರುವ ಅವರು, ‘ಅನಿಮಲ್’ ಮತ್ತು ‘ಪುಷ್ಪ-2’ ಚಿತ್ರಗಳ ಮೂಲಕ ಭರ್ಜರಿ ಯಶಸ್ಸು ಕಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !