April 15, 2026
Wednesday, April 15, 2026
spot_img

ಸಾವಿನ ಹೆದ್ದಾರಿಯಾದ ತಿಪಟೂರು ರಸ್ತೆ: ಕಾರು-ಬೈಕ್ ಮುಖಾಮುಖಿ ಡಿಕ್ಕಿ, ಸವಾರ ಸಾ*ವು

ಹೊಸದಿಗಂತ ತುಮಕೂರು:

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ ಸಂದಿದೆ. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕನೊಬ್ಬ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ತಿಪಟೂರು ತಾಲ್ಲೂಕಿನ ಬಿದಿರೆಗುಡಿ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಅರಸೀಕೆರೆ ತಾಲ್ಲೂಕಿನ ಬಿ.ಎಲ್. ಕೊಪ್ಪಲಿನ ಬಸವೇಶ್ವರ ನಗರದ ನಿವಾಸಿ ವಿಜಯ್ ಕುಮಾರ್ (24) ಮೃತ ದುರ್ದೈವಿ. ತಿಪಟೂರಿನ ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು, ರಾತ್ರಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವಿಜಯ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಬಿದಿರೆಗುಡಿ ಮತ್ತು ಕೊನೆಹಳ್ಳಿ ಭಾಗದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದೆಯಾದರೂ, ಯಾವುದೇ ಸುರಕ್ಷತಾ ಫಲಕಗಳನ್ನು ಅಳವಡಿಸದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಶಾಸಕರು ಕರೆದಿದ್ದ ಸಭೆಗೂ ಅಧಿಕಾರಿಗಳು ಗೈರುಹಾಜರಾಗಿರುವುದು ಅವರ ಉಡಾಫೆ ವರ್ತನೆಯನ್ನು ಎತ್ತಿ ತೋರಿಸುತ್ತದೆ. ಅಧಿಕಾರಿಗಳ ಈ ಹಠಮಾರಿ ಧೋರಣೆಯೇ ಸರಣಿ ಅಪಘಾತಗಳಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !