National Flag Day | ಇಂದು ರಾಷ್ಟ್ರೀಯ ಧ್ವಜ ದಿನ: ಭಾರತದ ತ್ರಿವರ್ಣ ಧ್ವಜದ ಇತಿಹಾಸ, ಮಹತ್ವದ ಬಗ್ಗೆ ನೀವೂ ತಿಳಿದುಕೊಳ್ಳಿ

ಭಾರತದ ತ್ರಿವರ್ಣ ಧ್ವಜವು ಧೈರ್ಯ, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿ ರಾಷ್ಟ್ರದ ಏಕತೆ, ಸ್ವಾತಂತ್ರ್ಯ ಹಾಗೂ ಸಾಮರಸ್ಯದ ಚಿಹ್ನೆಯಾಗಿ ಗುರುತಿಸಿಕೊಂಡಿದೆ. ಪ್ರತಿವರ್ಷ ಜುಲೈ 22ರಂದು ರಾಷ್ಟ್ರಧ್ವಜದ ದಿನವನ್ನು ಆಚರಿಸಲಾಗುತ್ತದೆ. 1947ರ ಜುಲೈ 22ರಂದು ಸಂವಿಧಾನ ಸಭೆ ತ್ರಿವರ್ಣ ಧ್ವಜವನ್ನು ಅಧಿಕೃತವಾಗಿ ಅಂಗೀಕರಿಸಿದ್ದನ್ನು ಸ್ಮರಿಸಲು ಈ ದಿನ ನಿಗದಿಪಡಿಸಲಾಗಿದೆ. ಈ ದಿನವು ಧ್ವಜದ ಶ್ರೇಷ್ಠತೆಯನ್ನು ಗೌರವಿಸುವುದರ ಜೊತೆಗೆ ಭಾರತವು ಏಕತೆಯಿಂದ ನಡೆದು ಬಂದ ಹಾದಿಯ ನೆನಪಿಗೂ ಪೂರಕವಾಗಿದೆ.

ಧ್ವಜದ ವಿನ್ಯಾಸ ಮತ್ತು ಅರ್ಥ
ಭಾರತದ ತ್ರಿವರ್ಣ ಧ್ವಜವು ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿಂದ ಕೂಡಿದ್ದು, ಮಧ್ಯದಲ್ಲಿ ನೀಲಿ ಅಶೋಕ ಚಕ್ರವಿದೆ. ಕೇಸರಿ ಧೈರ್ಯ ಮತ್ತು ತ್ಯಾಗ, ಬಿಳಿ ಶಾಂತಿ ಮತ್ತು ಸತ್ಯ, ಹಸಿರು ಸಮೃದ್ಧಿಯ ಸಂಕೇತವಾಗಿದ್ದು, ಅಶೋಕ ಚಕ್ರವು ನಿರಂತರ ಪ್ರಗತಿಯ ಚಿಹ್ನೆ. ಅಶೋಕ ಚಕ್ರವು ಸತ್ಯ, ಧರ್ಮ, ಮತ್ತು ಕಾರ್ಯನಿಷ್ಠೆಯ ತತ್ವಗಳನ್ನು ಪ್ರತಿನಿಧಿಸುತ್ತದೆ. ಇದರ 24 ಗೆರೆಗಳು ದಿನದ 24 ಗಂಟೆಗಳ ಕಾರ್ಯನಿರತಿಯನ್ನು ಸೂಚಿಸುತ್ತವೆ.

ರಾಷ್ಟ್ರಧ್ವಜದ ಐತಿಹಾಸಿಕ ಪರಿವರ್ತನೆ
ಭಾರತದ ಧ್ವಜವನ್ನು ಸ್ವಾತಂತ್ರ್ಯಪೂರ್ವದಿಂದ ಇಲ್ಲಿಯವರೆಗೆ ಆರು ಬಾರಿ ಬದಲಾಯಿಸಲಾಗಿದೆ. ಮೊದಲ ಧ್ವಜ 1906ರಲ್ಲಿ ಕೋಲ್ಕತ್ತಾದಲ್ಲಿ ಹಾರಿಸಲಾಯಿತು. ಪ್ರತಿ ಬದಲಾವಣೆಯು ಭಾರತೀಯರ ಭಾವನೆ, ತ್ಯಾಗ ಮತ್ತು ಹೋರಾಟವನ್ನು ಪ್ರತಿಬಿಂಬಿಸುತ್ತದೆ.

ತ್ರಿವರ್ಣ ಧ್ವಜದ ವಿನ್ಯಾಸಕರಾದ ಪಿಂಗಲಿ ವೆಂಕಯ್ಯ ಅವರು ಈ ಧ್ವಜವನ್ನು ರೂಪಿಸಿ ರಾಷ್ಟ್ರಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಅವರು ವಿನ್ಯಾಸಿಸಿದ ಧ್ವಜವೇ ಸ್ವಾತಂತ್ರ್ಯ ನಂತರ ಅಧಿಕೃತ ರಾಷ್ಟ್ರಧ್ವಜವಾಯಿತು. ಆಂಧ್ರಪ್ರದೇಶದ ವಿದ್ವಾಂಸ ಮತ್ತು ದಾರ್ಶನಿಕರಾದ ವೆಂಕಯ್ಯ ಅವರು ನೂಲುವ ಚಕ್ರವನ್ನು ಒಳಗೊಂಡ ತಮ್ಮ ವಿನ್ಯಾಸವನ್ನು ವಿಜಯವಾಡದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧಿಯವರಿಗೆ ಪ್ರಸ್ತುತಪಡಿಸಿದರು.

ಜುಲೈ 22ರಂದು ಧ್ವಜದ ಇತಿಹಾಸ ಮತ್ತು ಇದರ ಹಿಂದೆ ಇರುವ ತತ್ವಗಳನ್ನು ಗೌರವಿಸುವುದು ದೇಶಪ್ರೇಮದ ಸಂಕೇತವಾಗಿದೆ. ಇದು ಎಲ್ಲಾ ನಾಗರಿಕರಲ್ಲಿ ದೇಶದ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಗಂಭೀರತೆಯ ಭಾವನೆ ಮೂಡಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!