ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಚಾರ್ಜ್‌ಶೀಟ್‌ನ್ನು ಪರಿಗಣಿಸಲು ರೌಸ್ ಅವೆನ್ಯೂ ನ್ಯಾಯಾಲಯ ನಿರಾಕರಿಸಿದ್ದು, ಪ್ರಕರಣದಲ್ಲಿ ಇಡಿಯ ಆರೋಪಗಳಿಗೆ ತಾತ್ಕಾಲಿಕ ಅಡ್ಡಿಯಾಗಿದೆ.
ವಿಶೇಷ ನ್ಯಾಯಮೂರ್ತಿ ವಿಶಾಲ್ ಗೋಗಾನೆ ಅವರ ಪೀಠ, ಪಿಎಂಎಲ್‌ಎ ಅಡಿಯಲ್ಲಿ ಸಲ್ಲಿಸಲಾದ ದೂರು ವಿಚಾರಣೆಗೆ ಅರ್ಹವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಪ್ರಕರಣವು ಪ್ರಥಮ ಮಾಹಿತಿ ವರದಿ ಆಧಾರಿತವಲ್ಲದೆ ಖಾಸಗಿ ದೂರಿನ ಮೇಲೆ ನಿಂತಿರುವುದರಿಂದ, ಪ್ರಸ್ತುತ ಚಾರ್ಜ್‌ಶೀಟ್ ಸ್ವೀಕಾರಾರ್ಹವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದರೂ ತನಿಖೆಯನ್ನು ಮುಂದುವರಿಸಲು ಇಡಿಗೆ ಅವಕಾಶವಿದೆ ಎಂದು ಕೋರ್ಟ್ ತಿಳಿಸಿದೆ.
ಏಪ್ರಿಲ್ 9ರಂದು ಇಡಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್, ಸ್ಯಾಮ್ ಪಿತ್ರೋಡಾ, ಸುಮನ್ ದುಬೆ ಹಾಗೂ ಇತರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಟಕ ಸಂಸ್ಥೆಯಾಗಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ ಆಸ್ತಿಗಳನ್ನು ಯಂಗ್ ಇಂಡಿಯನ್ ಸ್ವಾಧೀನಪಡಿಸಿಕೊಂಡ ವಿಚಾರವೇ ಈ ಪ್ರಕರಣದ ಕೇಂದ್ರಬಿಂದುವಾಗಿದೆ.

