ಭಾರತೀಯ ಸಂಪ್ರದಾಯದಲ್ಲಿ ನವರಾತ್ರಿ ವಿಶೇಷ ಸ್ಥಾನಮಾನ ಪಡೆದ ಹಬ್ಬವಾಗಿದೆ. ಪ್ರತಿಯೊಂದು ದಿನವೂ ದುರ್ಗಾ ದೇವಿಯ ವಿಭಿನ್ನ ರೂಪಗಳನ್ನು ಆರಾಧನೆ ಮಾಡುವ ಹಬ್ಬ. 2025ರ ಶರನ್ನವರಾತ್ರಿಯ ನಾಲ್ಕನೇ ದಿನವು ಕೂಷ್ಮಾಂಡ ದೇವಿಯ ಆರಾಧನೆಗೆ ಮೀಸಲಾಗಿದ್ದು, ಭಕ್ತರು ವಿಧಿ ವಿಧಾನಗಳೊಂದಿಗೆ ಈ ದಿನವನ್ನು ಆಚರಿಸುತ್ತಿದ್ದಾರೆ.
ಈ ದಿನ ಕೂಷ್ಮಾಂಡ ದೇವಿಯ ಆರಾಧನೆಗೆ ಅವಳಿಗೆ ಪ್ರಿಯವಾದ ಮಾಲ್ಪುವಾ, ಮೊಸರು ಮತ್ತು ಹಲ್ವಾವನ್ನು ಅರ್ಪಿಸುವುದು ಶುಭಕರ. ಕೆಂಪು ಬಣ್ಣದ ಹೂವುಗಳು, ವಿಶೇಷವಾಗಿ ಕೆಂಪು ಕಮಲ, ದಾಸವಾಳ ಮತ್ತು ಚೆಂಡು ಹೂವುಗಳನ್ನು ಅರ್ಪಿಸುವುದರಿಂದ ದೇವಿಯ ಕೃಪೆ ದೊರೆಯುತ್ತದೆ ಎಂದು ನಂಬಲಾಗಿದೆ. ಈ ದಿನ ಭಕ್ತರು ಹಳದಿ ಬಣ್ಣದ ವಸ್ತ್ರ ಧರಿಸುವುದು ವಿಶೇಷ ಶುಭಕರವೆಂದು ಪರಿಗಣಿಸಲಾಗಿದೆ.
ಕೂಷ್ಮಾಂಡ ದೇವಿ
ಕೂಷ್ಮಾಂಡ ದೇವಿಯ ಹೆಸರು ಮೂರು ಪದಗಳಿಂದ ಬಂದಿದೆ – ಕು (ಸಣ್ಣ), ಉಷ್ಮ (ಶಕ್ತಿ) ಮತ್ತು ಅಂಡ (ಬ್ರಹ್ಮಾಂಡ). ಎಂಟು ಕೈಗಳನ್ನು ಹೊಂದಿರುವ ಈ ದೇವಿ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ಅವಳ ಕೈಯಲ್ಲಿ ಕಮಲ, ಕಮಂಡಲ, ಬಿಲ್ಲು, ಬಾಣ, ಅಮೃತ ಕಲಶ, ಜಪಮಾಲೆ, ಗದ ಮತ್ತು ಚಕ್ರವಿದೆ. ಖಿನ್ನತೆ, ಭಯ, ಆತಂಕ ಹಾಗೂ ದುಃಖವನ್ನು ನಿವಾರಿಸಲು ಭಕ್ತರು ಈ ದಿನ ಅವಳ ಆರಾಧನೆ ಮಾಡುತ್ತಾರೆ.
ಕೂಷ್ಮಾಂಡ ದೇವಿ ಕಥೆ
ಪುರಾಣಗಳ ಪ್ರಕಾರ, ಸೃಷ್ಟಿಯ ಆರಂಭದಲ್ಲಿ ಬ್ರಹ್ಮಾಂಡವು ಸಂಪೂರ್ಣ ಕತ್ತಲೆಯಿಂದ ಆವರಿತವಾಗಿತ್ತು. ಆ ಸಮಯದಲ್ಲಿ ದೇವಿ ಕೂಷ್ಮಾಂಡ ತನ್ನ ನಗುವಿನಿಂದ ಸೌರವ್ಯೂಹವನ್ನು ಬೆಳಗಿಸಿ, ಗ್ರಹ-ನಕ್ಷತ್ರಗಳಿಗೆ ಶಕ್ತಿ ನೀಡಿದಳು. ಸೂರ್ಯನ ಶಕ್ತಿ ಮತ್ತು ಕಾಂತಿ ಕೂಡ ದೇವಿಯ ಕೃಪೆಯಿಂದಲೇ ಬಂದಿದೆ ಎಂಬ ನಂಬಿಕೆ ಇದೆ.
ಪೂಜೆ ವಿಧಾನ
ಮುಂಜಾನೆ ಸ್ನಾನ ಮಾಡಿ, ಸ್ವಚ್ಛವಾದ ವಸ್ತ್ರ ಧರಿಸಬೇಕು. ನಂತರ ದೇವಿಯ ಮುಂದೆ ತುಪ್ಪದ ದೀಪ ಹಚ್ಚಿ, ಸಿಂಧೂರ ಹಾಗೂ ಹೂವುಗಳನ್ನು ಅರ್ಪಿಸಬೇಕು. ಐದು ಬಗೆಯ ಹಣ್ಣುಗಳನ್ನು ನೈವೇದ್ಯವಾಗಿ ಸಮರ್ಪಿಸಬೇಕು. ಹಾಗೂ ದುರ್ಗಾ ಚಾಲೀಸಾ ಹಾಗೂ ಸಪ್ತಶತಿಯನ್ನು ಪಠಿಸಿ, ದೇವಿಯ ಮಂತ್ರಗಳನ್ನು ಜಪಿಸಬೇಕು. ಅಂತಿಮವಾಗಿ ಆರತಿಯನ್ನು ಮಾಡಿ ಪ್ರಸಾದ ವಿತರಿಸಬೇಕು.
ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಆರೋಗ್ಯ, ಸಂಪತ್ತು ಮತ್ತು ಮಾನಸಿಕ ಶಾಂತಿ ದೊರೆಯುತ್ತದೆ ಎನ್ನುವ ನಂಬಿಕೆ ಇದೆ. ಭಕ್ತಿಯುಳ್ಳ ಮನಸ್ಸಿನಿಂದ ಮಾಡಿದ ಪೂಜೆ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಪ್ರಗತಿಯನ್ನು ತಂದುಕೊಡುತ್ತದೆ.