ನೌಕಾನೆಲೆಯ ಮಾಹಿತಿ ಸೋರಿಕೆ ಆರೋಪ: ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಎನ್‌ಐಎ

ಹೊಸದಿಗಂತ ವರದಿ ಅಂಕೋಲಾ:

ರಕ್ಷಣಾ ಇಲಾಖೆಯ ಸೀ ಬರ್ಡ್ ನೌಕಾನೆಲೆಗೆ ಸಂಬಂಧಿಸಿದ ಮಾಹಿತಿಗಳನ್ನು ಸೋರಿಕೆ ಮಾಡಿ ಪಾಕಿಸ್ತಾನಿ ಏಜಂಟರ ಕೈ ಸೇರುವಂತೆ ಮಾಡಿರುವ ಆರೋಪದ ಮೇಲೆ ಎನ್. ಐ.ಎ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವುದಾಗಿ ತಿಳಿದು ಬಂದಿದೆ.

ಆರು ಜನರನ್ನು ಒಳಗೊಂಡ ಎನ್.ಐ.ಎ ಅಧಿಕಾರಿಗಳ ತಂಡ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಮುದಗಾದ ವೇತನ್ ತಾಂಡೇಲ್ ಮತ್ತು ಅಂಕೋಲಾ ತಾಲೂಕಿನ ಹಳವಳ್ಳಿಯ ಅಕ್ಷಯ ನಾಯ್ಕ ಅವರನ್ನು ವಶಕ್ಕೆ ಪಡೆದು ಕಾರವಾರ ಮತ್ತು ಅಂಕೋಲಾಗಳಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದು ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎನ್ನಲಾಗಿದೆ.

ಕಳೆದ ಅಗಸ್ಟ್ ತಿಂಗಳಲ್ಲಿ ಈ ಇಬ್ಬರು ಆರೋಪಿಗಳನ್ನು ಸೇರಿದಂತೆ ಮೂರು ಜನರನ್ನು ವಶಕ್ಕೆ ಪಡೆದ ಎನ್.ಐ.ಎ ತಂಡ ತೀವ್ರ ವಿಚಾರಣೆಗೊಳಪಡಿಸಿ ತೆರಳಿದ್ದರು. ಇದೀಗ ಜಿಲ್ಲೆಗೆ ಮತ್ತೆ ಆಗಮಿಸಿದ ರಾಷ್ಟ್ರೀಯ ಗುಪ್ತಚರ ದಳದ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ ನೌಕಾನೆಲೆಯ ಮಾಹಿತಿ ಸೋರಿಕೆ ಮಾಡಿರುವ ಕುರಿತು ಸಾಕಷ್ಟು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಪಾಕಿಸ್ತಾನದ ಮಹಿಳಾ ಏಜೆಂಟ್ ಒಬ್ಬರು ತಾವು ಮರೈನ್ ಅಧಿಕಾರಿ ಎಂದು ಸಾಮಾಜಿಕ ಜಾಲ ತಾಣದ ಮೂಲಕ ಪರಿಚಯಿಸಿಕೊಂಡು ಸೀ ಬರ್ಡ್ ನೌಕಾನೆಲೆಯ ಹಲವಾರು ಪೋಟೋಗಳು ಸೇರಿದಂತೆ ಮಾಹಿತಿ ಪಡೆದುಕೊಂಡಿದ್ದು ಮಾಹಿತಿ ನೀಡಿದ ಯುವಕರ ಖಾತೆಗೆ ಹಣ ಸಹ ಸಂದಾಯ,ಮಾಡಲಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿತ್ತು.

ಎರಡು ವರ್ಷಗಳ ಹಿಂದೆ ಹೈದರಾಬಾದ್ ನಲ್ಲಿ ರಕ್ಷಣಾ ಇಲಾಖೆ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿತರ ತಂಡವೊಂದನ್ನು ಬಂಧಿಸಿದ ಎನ್.ಐ.ಎ ಅಧಿಕಾರಿಗಳಿಗೆ ಕಾರವಾರದ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದವರು ಮಾಹಿತಿ ಸೋರಿಕೆಯಲ್ಲಿ ಭಾಗಿ ಆಗಿರುವುದು ವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿತ್ತು ನೌಕಾನೆಲೆ ಕೆಲಸವನ್ನು ಬಿಟ್ಟು ಬೇರೆ ಕಡೆ ಕೆಲಸಕ್ಕೆ ಸೇರಿಕೊಂಡಿದ್ದ ಅಂಕೋಲಾ ಹಳವಳ್ಳಿಯ ಅಕ್ಷಯ ನಾಯ್ಕನನ್ನು ಎನ್. ಐ.ಎ ಅಧಿಕಾರಿಗಳು ಬಂಧಿಸಿ ಕರೆ ತಂದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!