ಹೊಸದಿಗಂತ, ಮಂಗಳೂರು:
ಉಡುಪಿ ಜಿಲ್ಲೆಯ ಕೆಲವೆಡೆಗಳಲ್ಲಿ ನಕ್ಸಲರ ಚಲನವಲನ ಕಾಣಿಸಿಕೊಂಡಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ತನ್ನ ಕೂಂಬಿಂಗ್ ಇನ್ನಷ್ಟು ಚುರುಕುಗೊಳಿಸಿದೆ.
ಇಲ್ಲಿನ ಮುದೂರು, ಜಡ್ಕಲ್, ಬೆಳ್ಕಲ್ ಪರಿಸರದಲ್ಲಿ ನಕ್ಸಲರ ನೆರಳು ಕಾಣಿಸಿಕೊಂಡಿದೆ ಎಂಬ ಮಾಹಿತಿಗಳು ಹರಿದಾಡುತ್ತಿದ್ದು, ಈ ನಡುವೆ ಮಾಹಿತಿ ಆಧರಿಸಿ ನಕ್ಸಲರು ಭೇಟಿ ನೀಡಿ ತೆರಳಿದ್ದಾರೆ ಎನ್ನಲಾದ ಮನೆಗಳು, ವ್ಯಕ್ತಿಗಳಿಂದ ಎಎನ್‌ಎಫ್ ಸಿಬಂದಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಕುಂದಾಪುರ ಭಾಗದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಹೆಚ್ಚುತ್ತಿರುವ ಸೂಚನೆ ಲಭಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೂಡಾ ಅಲರ್ಟ್ ಆಗಿದ್ದು, ಎಎನ್‌ಎಫ್ ತಂಡವನ್ನು ಕೊಲ್ಲೂರು ಸುತ್ತಲಿನ ಸೂಕ್ಷ್ಮ ಪ್ರದೇಶಗಳಿಗೆ ಕಳುಹಿಸಿಕೊಡಲಾಗಿದೆ. ಕೇರಳ ಭಾಗದಲ್ಲಿ ನಕ್ಸಲ್ ರ ವಿರುದ್ದ ನಿರಂತರ ಕಾರ್ಯಾಚರಣೆ ಆರಂಭವಾಗಿರುವ ಹಿನ್ನೆಲೆಯಲ್ಲಿ ನಕ್ಸಲ್ ತಂಡವು ಕರ್ನಾಟಕ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದೂ ಅಧಿಕಾರಿಗಳು ಶಂಕಿಸಿದ್ದಾರೆ.