ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಇತಿಹಾಸದಲ್ಲಿಯೇ ಮೊದಲು ಎನ್ನುವಂತೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಮ್ಮುಖದಲ್ಲೇ ಮೋಸ್ಟ್ ವಾಂಟೆಂಡ್ 6 ನಕ್ಸಲರು ಶರಣಾಗತಿಯಾಗಿದ್ದಾರೆ.
ಸರ್ಕಾರದ ಭರವಸೆ ಜೊತೆಗೆ ಶಾಂತಿಗಾಗಿ ನಾವು ಸಂಘಟನೆ ಹಾಗೂ ಶರಣಾಗತಿ ನೀತಿ ಸಮಿತಿ ಸದಸ್ಯರು ಮನವೊಲಿಸಿ ನಕ್ಸಲೀಯರಾದ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ಕೆ. ವಸಂತ, ಜಿಶಾ ಹಾಗೂ ಮಾರೆಪ್ಪ ಅರೋಲಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಶರಣಾದರು. ಈ ವೇಳೆ ಹೂಗುಚ್ಛ ಹಾಗೂ ಸಂವಿಧಾನ ಪುಸ್ತಕ ನೀಡಿ ಸ್ವಾಗತಿಸಲಾಯಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಅನ್ಯಾಯದ ವಿರುದ್ಧ, ಶೋಷಣೆ, ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಹೋರಾಡುವುದು ತಪ್ಪಲ್ಲ. ವ್ಯವಸ್ಥೆ ಬದಲಾವಣೆಗೆ ಹೋರಾಟ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಹೋರಾಟ ಶಾಂತಿಯುತವಾಗಿ, ನ್ಯಾಯಯುತವಾಗಿ ಮಾಡಬೇಕು. ನಕ್ಸಲಿಸಂ, ಶಸ್ತ್ರಾಸ್ತ್ರ ಹೋರಾಟಕ್ಕೆ ಸಂವಿಧಾನದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಈ ಹಿಂದೆಯೂ ಹಲವು ನಕ್ಸಲೀಯರು ಶಸ್ತ್ರಾಸ್ತ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಇವರ ಪುನರ್ವಸತಿಗೆ ಸರ್ಕಾರ ನೆರವು ಒದಗಿಸಿದೆ’ ಎಂದರು.
ಶಾಂತಿಗಾಗಿ ನಾಗರಿಕ ವೇದಿಕೆಯು ನನ್ನನ್ನು ಭೇಟಿ ಮಾಡಿ ನಕ್ಸಲಿಯರ ಮನವೊಲಿಸುವ ಬಗ್ಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ನಕ್ಸಲಿಸಂ ತ್ಯಜಿಸಿ ಮುಖ್ಯವಾಹಿನಿಗೆ ಬರಲು ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ಹೇಳಿದ್ದೆ. ಕರ್ನಾಟಕದಲ್ಲಿ ನಕ್ಸಲಿಸಂ ಕೊನೆಗಾಣಿಸಲು ಅವರ ಬೇಡಿಕೆಗೆ ಸ್ಪಂದಿಸಲು ಏನೆಲ್ಲಾ ಕಾರ್ಯಕ್ರಮ ಅಗತ್ಯವೊ ಅದನ್ನು ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ’ ಎಂದು ಸಿಎಂ ಅಭಯ ನೀಡಿದರು.
ಶಸ್ತ್ರಾಸ್ತ್ರ ಮೂಲಕ ಹೋರಾಟ ಮಾಡಿ ನ್ಯಾಯ ಪಡೆಯಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ. ಶಾಂತಿಯುತವಾಗಿ ಹೋರಾಟ ನಡೆಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಸರ್ಕಾರ ಇದನ್ನು ವಿರೋಧಿಸುವುದಿಲ್ಲ. ಆದರೆ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಸುಮ್ಮನಿರಲ್ಲ. ನಕ್ಸಲಿಸಂ ಮುಕ್ತವಾದ ಸಮಾಜ ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗೆ ಬರುವ ನಕ್ಸಲಿಯರಿಗೆ ಎಲ್ಲಾ ರೀತಿಯ ನೆರವು ಬಹಿರಂಗವಾಗಿ ಹೇಳಿದ್ದೆ. ನಿಮ್ಮನ್ನು ಕ್ರಿಮಿನಲ್‌ಗಳ ರೀತಿ ನೋಡದೆ, ಮಾನವರಂತೆ ನೋಡುವ ಭರವಸೆ ನೀಡಿದಂತೆ ಸರ್ಕಾರ ನಡೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದರು.