ಹೊಸದಿಗಂತ ಡಿಜಿಟಲ್ ಡೆಸ್ಕ್:
8ನೇ ತರಗತಿಯ ಎನ್‌ಸಿಇಆರ್‌ಟಿ ಪುಸ್ತಕಗಳ ವಿವಾದದ ಬೆನ್ನಲ್ಲೇ ಎಲ್ಲಾ ತರಗತಿಗಳ ಪುಸ್ತಕಗಳನ್ನು ಪರಿಶೀಲಿಸುವಂತೆ ಎನ್ಸಿಇಆರ್ಟಿಗೆ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಎಂಟನೇ ತರಗತಿಯ ಸಾಮಾಜ ವಿಜ್ಞಾನ ಪುಸ್ತಕದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಎಂಬ ಪಾಠ ಸೇರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ವಿಷಯವು ನ್ಯಾಯಾಂಗದ ಘನತೆಗೆ ಧಕ್ಕೆ ತರುವಂತಹದ್ದು ಎಂದು ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ, ಪುಸ್ತಕದ ಮುದ್ರಣ, ವಿತರಣೆ ಮತ್ತು ಡಿಜಿಟಲ್ ಪ್ರಸಾರಕ್ಕೆ ಸಂಪೂರ್ಣ ನಿಷೇಧ ಹೇರಿತು.
ಇಂದು ನಡೆದ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೋರ್ಟ್‌ಗೆ ಮಾಹಿತಿ ನೀಡಿ, ಕೇವಲ 8ನೇ ತರಗತಿ ಮಾತ್ರವಲ್ಲದೇ ಎನ್ಸಿಆರ್ಟಿಇಯ ಎಲ್ಲಾ ತರಗತಿಯ ಪಠ್ಯಪುಸ್ತಕದ ಪರಿಶೀಲನೆ ನಡೆಸುವಂತೆ ಎನ್ಸಿಇಆರ್ಟಿಗೆ ಸರ್ಕಾರ ಸೂಚನೆ ನೀಡಿತು. ಪಠ್ಯಕ್ರಮವನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿದರು.
ಸರ್ಕಾರವು ವಿಶೇಷ ತಜ್ಞರ ಸಮಿತಿಯನ್ನು ರಚಿಸಿ ಪಠ್ಯಕ್ರಮದ ಸಮೀಕ್ಷೆ ಮಾಡಿದರೆ ಒಳ್ಳೆಯದು ಎಂದು ಕೋರ್ಟ್ ಹೇಳಿತು. ಇದೇ ವೇಳೆ ಎನ್‌ಸಿಇಆರ್‌ಟಿ ನಿರ್ದೇಶಕರು ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿ ಕ್ಷಮಾಪಣೆ ಕೇಳಿದರು. ಪುಸ್ತಕವನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ ಎಂದು ತಿಳಿಸಿದರು.



