ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಜೀವಕ್ಕೆ ಅಪಾಯವಿದೆ. ಸೌರಭ್ ಪಿಂಪಾಲ್ಕರ್ ಎಂಬ ಟ್ವಿಟರ್ ಹ್ಯಾಂಡಲ್ ನಿಂದ ಜೀವ ಬೆದರಿಕೆ ಬಂದಿದೆ. ಈ ಕುರಿತು ಶರದ್ ಪವಾರ್ ಅವರ ಪುತ್ರಿ, ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಮುಂಬೈ ಪೊಲೀಸ್ ಕಮಿಷನರ್ ಕಚೇರಿಗೆ ದೂರು ದಾಖಲಿಸಿದ್ದಾರೆ. ಸುಪ್ರಿಯಾ ಸುಳೆ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿಯಾಗಿ ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಸುಪ್ರಿಯಾ ಸುಳೆ, ‘ನನ್ನ ವಾಟ್ಸಾಪ್ನಲ್ಲಿ ಗೌರವಾನ್ವಿತ ಪವಾರ್ ಸಾಹೇಬ್ ಅವರ ಹೆಸರಿನಲ್ಲಿ ಸಂದೇಶ ಬಂದಿದೆ. ಇದೊಂದು ಬೆದರಿಕೆ ಸಂದೇಶ. ನಾನು ಈ ವಿಷಯವನ್ನು ಮುಂಬೈ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಒಬ್ಬ ಮಹಿಳೆಯಾಗಿ, ಒಬ್ಬ ಪ್ರಜೆಯಾಗಿ ನಾನು ಮಹಾರಾಷ್ಟ್ರದ ಗೃಹ ಸಚಿವರಿಂದ ನ್ಯಾಯ ಕೇಳುತ್ತೇನೆ. ಶರದ್ ಪವಾರ್ಗೆ ಏನಾದರೂ ಸಂಭವಿಸಿದರೆ ದೇಶ ಮತ್ತು ರಾಜ್ಯದ ಗೃಹ ಸಚಿವರು ಹೊಣೆಯಾಗಬೇಕು. ಮಹಾರಾಷ್ಟ್ರದಲ್ಲಿ ಗುಪ್ತಚರ ವೈಫಲ್ಯ ಎದ್ದು ಕಾಣುತ್ತಿದೆʼ ಎಂದರು.
ಈ ಬೆದರಿಕೆಯ ಹಿಂದೆ ಯಾರಿದ್ದಾರೆ ಮತ್ತು ಕಾಣದ ಕೈ ಇದೆಯೇ ಎಂದು ತಿಳಿಯಬೇಕಿದೆ ಎಂದರು. ಬೆದರಿಸುವ ಭಾಷೆ ಮತ್ತು ಕಾಮೆಂಟ್ಗಳಲ್ಲಿ ವಾಕ್ಯಗಳನ್ನು ಬರೆದಿರುವ ರೀತಿಯನ್ನು ನೋಡಿದರೆ ಭಯದ ವಾತಾವರಣ ಸೃಷ್ಟಿಯಾಗಿದೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಇಷ್ಟೊಂದು ದ್ವೇಷ ಏಕೆ?
ಅಮಿತ್ ಶಾ ಭೇಟಿ
ಶೀಘ್ರದಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡುವುದಾಗಿ ಸುಪ್ರಿಯಾ ಸುಳೆ ಹೇಳಿದ್ದಾರೆ. ಈ ಸರ್ಕಾರ ಹೆಣ್ಣುಮಗುವಿನ ರಕ್ಷಣೆ ಮತ್ತು ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸುವ ಬಗ್ಗೆ ಮಾತನಾಡುತ್ತದೆ…ಆದರೆ ಇಂದು ಮಹಾರಾಷ್ಟ್ರದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ, ಅಷ್ಟೊಂದು ರಕ್ಷಣೆಯ ಕೊರತೆ ಎದ್ದು ಕಾಣುತ್ತಿದೆ ಎಂದರು.