ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎಗೆ ಸಿಕ್ಕಿತು ಬಲ: ರಾಜ್ಯಸಭೆಯಲ್ಲಿ 100 ದಾಟಿದ ಬಿಜೆಪಿ ಸದಸ್ಯರ ಸಂಖ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಸಂಸತ್ ಚಳಿಗಾಲದ ಅಧಿವೇಶನದ ಮೊದಲ ದಿನವೇ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಇದಾದ ಬಳಿಕ ಕೇಂದ್ರ ಸರ್ಕಾರವು ಮುಂದಿನ ಉಪರಾಷ್ಟ್ರಪತಿ ಚುನಾವಣೆಯ ಕಾರ್ಯತಂತ್ರದ ಕಡೆ ಗಮನ ವಹಿಸಿದ್ದು, ಇದರ ನಡುವೆ, ಬಿಜೆಪಿಗೆ ಸಂಸತ್ತಿನ ರಾಜ್ಯಸಭೆಯಿಂದ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಹೌದು, ಇತ್ತೀಚೆಗೆ ರಾಜ್ಯಸಭೆಗೆ ರಾಷ್ಟ್ರಪತಿಗಳು ನಾಲ್ವರನ್ನು ನಾಮನಿರ್ದೇಶನ ಮಾಡಿದರು. ಇನ್ನು ಈ ನಾಲ್ವರಲ್ಲಿ, ಮೂವರು ಸದಸ್ಯರು ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಹೀಗಾಗಿ, ಸಂಸತ್ತಿನ ಮೇಲ್ಮನೆಯಲ್ಲಿ ಬಿಜೆಪಿಯ ಸಂಖ್ಯೆ ಈಗ 102 ಕ್ಕೆ ತಲುಪಿದೆ. ಇನ್ನು, ಉಜ್ವಲ್ ನಿಕಂ, ಹರ್ಷವರ್ಧನ್ ಶ್ರಿಂಗ್ಲಾ ಮತ್ತು ಸಿ. ಸದಾನಂದನ್ ಮಾಸ್ಟರ್ ಅವರು ಬಿಜೆಪಿಗೆ ಸೇರ್ಪಡೆಗೊಂಡ ಸದಸ್ಯರಾಗಿದ್ದಾರೆ. ಆದ್ರೆ, ಇವರೊಂದಿಗೆ ನಾಮನಿರ್ದೇಶನಗೊಂಡ ಪ್ರಖ್ಯಾತ ಇತಿಹಾಸಕಾರ್ತಿ ಹಾಗೂ ಬರಹಗಾರ್ತಿ ಡಾ. ಮೀನಾಕ್ಷಿ ಜೈನ್ ಅವರು ನಾಮನಿರ್ದೇಶನ ಸದಸ್ಯರಾಗೆ ಮುಂದುವರೆದಿದ್ದಾರೆ.

ಇತ್ತ ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9 ರಂದು ನಡೆಯಲಿದೆ.

ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ, ಬಿಜೆಪಿಯು ರಾಜ್ಯಸಭೆಯಲ್ಲಿ 100 ರ ಗಡಿ ದಾಟಿದ ಎರಡನೇ ರಾಜಕೀಯ ಪಕ್ಷವಾಗಿದೆ. ಇದಕ್ಕೂ ಮೊದಲು, ಕಾಂಗ್ರೆಸ್ 1988 ಮತ್ತು 1990 ರ ನಡುವೆ ಈ ಸಾಧನೆ ಮಾಡಿತ್ತು. ಆದಾಗ್ಯೂ, ಬಿಜೆಪಿ ಈಗಾಗಲೇ ಮೇ 2022 ರಲ್ಲಿ ಈ ಸಾಧನೆ ಮಾಡಿದೆ. ಅದರಂತೆ, ಆ ವೇಳೆ, ಬಿಜೆಪಿಯು ರಾಜ್ಯಸಭೆಯಲ್ಲಿ 101 ಸದಸ್ಯರನ್ನು ಹೊಂದಿತ್ತು.

ರಾಜ್ಯಸಭೆಯಲ್ಲಿ ಗರಿಷ್ಠ 250 ಸದಸ್ಯರನ್ನು ಹೊಂದಬಹುದಾದರೂ, ಪ್ರಸ್ತುತ ಸದಸ್ಯರ ಸಂಖ್ಯೆ 245 ರಷ್ಟಿದೆ. ಹಾಗಾಗಿ, ಈ 250 ಸ್ಥಾನಗಳಲ್ಲಿ 238 ಸದಸ್ಯರನ್ನು ವಿವಿಧ ರಾಜ್ಯಗಳ ವಿಧಾನಸಭೆಗಳು ಆಯ್ಕೆಮಾಡುತ್ತವೆ. ಉಳಿದ 12 ಸದಸ್ಯರನ್ನು ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡುತ್ತಾರೆ. ಇನ್ನು, ನಾಮನಿರ್ದೇಶಿತ ಸದಸ್ಯರನ್ನು ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಸಮಾಜಸೇವೆಯಂತಹ ಕ್ಷೇತ್ರಗಳಲ್ಲಿ ಸಾಧನೆಗೈದವರಿಂದ ಆಯ್ಕೆ ಮಾಡಲಾಗುತ್ತದೆ.

ಪ್ರಸ್ತುತ 12 ನಾಮನಿರ್ದೇಶಿತ ಸದಸ್ಯರಲ್ಲಿ ಐದು ಮಂದಿ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಅಥವಾ ಪಕ್ಷದೊಂದಿಗೆ ನೇರವಾಗಿ ಸಂಬಂಧ ಹೊಂದಿದ್ದಾರೆ. ಇದರಿಂದ ರಾಜ್ಯಸಭೆಯಲ್ಲಿ ಬಿಜೆಪಿಯ ಬಲ ಮತ್ತಷ್ಟು ಹೆಚ್ಚಿದೆ.ಇದು ಉಪರಾಷ್ಟ್ರಪತಿ ಅಥವಾ ಇತರ ಮಹತ್ವದ ಹುದ್ದೆಗಳ ಚುನಾವಣೆ ವೇಳೆ ಪಕ್ಷದ ತೀರ್ಮಾನಗಳ ಜಾರಿಗೆ ಪರಿಣಾಮ ಬೀರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!