15 ದಿನಗಳಲ್ಲಿ ಎನ್‌ಡಿಎ ಸರ್ಕಾರ ಪತನ: ಸ್ಫೋಟಕ ಭವಿಷ್ಯ ನುಡಿದ ಮಮತಾ ಬ್ಯಾನರ್ಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನರೇಂದ್ರ ಮೋದಿ ಅವರು ಭಾನುವಾರ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇತ್ತ  ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ವರಿಷ್ಠ ನಾಯಕಿ ಮಮತಾ ಬ್ಯಾನರ್ಜಿ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಯಾವುದೇ ಸರ್ಕಾರವು 15 ದಿನಗಳಲ್ಲಿ ಬೇಕಾದರೂ ಪತನವಾಗಬಹುದು ಎಂಬ ಹೇಳಿಕೆ ನೀಡುವ ಮೂಲಕ ಹೊಸ ಚರ್ಚೆಗೆ ಗ್ರಾಸವಾಗಿದೆ.

ತೃಣಮೂಲ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯ ಬಳಿಕ ಮಾತನಾಡಿದ ಮಮತಾ ಬ್ಯಾನರ್ಜಿ, ಯಾರು (ಬಿಜೆಪಿ) 400 ಸೀಟುಗಳ ಬಗ್ಗೆ ಮಾತನಾಡಿದ್ದರೋ, ಅವರಿಗೆ ಈಗ ಬಹುಮತ ಸಿಗದಷ್ಟು ಸ್ಥಾನಗಳು ಲಭಿಸಿವೆ. ಇಂಡಿಯಾ ಒಕ್ಕೂಟವು ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲ ಎಂದ ಮಾತ್ರಕ್ಕೆ ಏನೂ ಆಗುವುದಿಲ್ಲ ಎಂಬುದಾಗಿ ಭಾವಿಸದಿರಿ. ಸಮಯ ಬದಲಾಗುತ್ತದೆ, ಮನಸ್ಥಿತಿಗಳು ಬದಲಾಗುತ್ತವೆ. ಇದರ ಮೇಲೆ ಇಂಡಿಯಾ ಒಕ್ಕೂಟವು ಹೆಚ್ಚು ಗಮನ ಹರಿಸುತ್ತಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಒಂದು ದಿನ ಇಂಡಿಯಾ ಒಕ್ಕೂಟವು ಸರ್ಕಾರ ರಚಿಸುತ್ತದೆ. ಕೆಲವು ದಿನಗಳವರೆಗೆ ಅವರು (ಬಿಜೆಪಿ) ಅಧಿಕಾರದಲ್ಲಿ ಇರಲಿ. ಆದರೆ, ಒಂದು ನೆನಪಿರಲಿ, ಒಂದೇ ದಿನದಲ್ಲಿ ಬೇಕಾದರೂ ಸರ್ಕಾರ ಬೀಳಬಹುದು. ಏನು ಬೇಕಾದರೂ ಆಗಬಹುದು. ಯಾರಿಗೆ ಗೊತ್ತು, 15 ದಿನಗಳಲ್ಲಿ ಬೇಕಾದರೂ ಸರ್ಕಾರ ಪತನವಾಗಬಹುದು ಎಂಬುದಾಗಿ ಎನ್‌ಡಿಎ ಸರ್ಕಾರದ ಪತನದ ಕುರಿತು ಮಮತಾ ಬ್ಯಾನರ್ಜಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರು
ನರೇಂದ್ರ ಮೋದಿ ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಟಿಎಂಸಿ ನಿರ್ಧರಿಸಿದೆ ಎಂಬುದಾಗಿ ಮಮತಾ ಬ್ಯಾನರ್ಜಿ ಹೇಳಿದರು. ಕಾನೂನುಬಾಹಿರ ಹಾಗೂ ಪ್ರಜಾಸತ್ತಾತ್ಮಕವಲ್ಲದ ಮಾರ್ಗದ ಮೂಲಕ ಎನ್‌ಡಿಎ ಸರ್ಕಾರ ರಚಿಸುತ್ತಿದೆ. ಹಾಗಾಗಿ, ಪ್ರಮಾಣವಚನ ಕಾರ್ಯಕ್ರಮದಲ್ಲಿ ಟಿಎಂಸಿ ಭಾಗವಹಿಸಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!