ಹೊಸದಿಗಂತ ಡಿಜಿಟಲ್ ಡೆಸ್ಕ್;
ಎನ್ ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್ ಅವರು ಇಂದು ದೆಹಲಿಯ ಸಪ್ಥರ್ ಜಂಗ್ ಲೇನ್ ನಲ್ಲಿ ಮಾಜಿ ಪ್ರಧಾನಿ ಹಾಗೂ ಜನತಾ ದಳ (ಎಸ್) ಪಕ್ಷದ ಹಿರಿಯ ನಾಯಕ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾದರು.
ಈ ವೇಳೆ ರಾಧಾಕೃಷ್ಣನ್ ಅವರನ್ನು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಬರಮಾಡಿಕೊಂಡರು. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸಾಥ್ ನೀಡಿದರು.
ಆ ಬಳಿ ದೆಹಲಿಯಲ್ಲಿ ಮಾತನಾಡಿದ ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರ ಮಾಡುವ ಶೈಲಿ ಹಾಗೂ ಇತ್ತೀಚಿನ ರಾಜ್ಯಪಾಲರ ನೇಮಕಾತಿ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನನ್ನ 10 ವರ್ಷದ ಅನುಭವದಲ್ಲಿ ಮೋದಿ ಅವರ ಮನಸ್ಸನ್ನು ಯಾರು ಪತ್ತೆಹಚ್ಚಲು ಸಾಧ್ಯವಿಲ್ಲ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕೊನೆಯ ಕ್ಷಣದ ತನಕ ಯಾರಿಗೂ ತಿಳಿಯದು. ಕೊನೆಯ ಗಳಿಗೆಯ ತನಕ ತಮ್ಮ ಗುಟ್ಟನ್ನು ಬಿಚ್ಚಿಡುವುದಿಲ್ಲ. ಈ ಬಾರಿ ಕೂಡ ಅದೇ ರೀತಿಯಲ್ಲಿ ನಡೆದುಕೊಂಡಿದ್ದಾರೆ.
ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತ ನಿರ್ಧಾರವಾಗಿದೆ. ಎಲ್ಲಾ ದೃಷ್ಟಿಯಿಂದಲೂ ಅವರು ಸಮರ್ಥರು, ಅರ್ಹರು ಮತ್ತು ಯೋಗ್ಯ ಅಭ್ಯರ್ಥಿ. ರಾಜ್ಯಪಾಲರಾಗಿ, ಲೆಫ್ಟಿನೆಂಟ್ ಗವರ್ನರ್ ಆಗಿ, ಲೋಕಸಭೆಯ ಹಲವು ಸಮಿತಿಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮಿತಿಗಳ ಭಾಗವಾಗಿದ್ದಾರೆ. ಜೊತೆಗೆ 24 ದೇಶಗಳಿಗೆ ಭೇಟಿ ನೀಡಿ ತಮ್ಮ ಅನುಭವವನ್ನು ವಿಸ್ತರಿಸಿಕೊಂಡಿದ್ದಾರೆ. ಜನಸಾಮಾನ್ಯರ ಮಧ್ಯದಿಂದ ಬೆಳೆಯುವ ಮೂಲಕ ತಮ್ಮ ಹಾದಿಯನ್ನು ನಿರ್ಮಿಸಿಕೊಂಡ ವ್ಯಕ್ತಿ ಅವರು. ಹೀಗಾಗಿ ಇಂತಹ ವ್ಯಕ್ತಿಯನ್ನು ಆಯ್ಕೆ ಮಾಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ನಾನು ಈಗ ಒಬ್ಬ ಸಾಮಾನ್ಯ ಸದಸ್ಯನಾಗಿ ಕೆಲಸ ಮಾಡುವ ಅವಕಾಶವನ್ನು ಹೊಂದಿದ್ದೇನೆ. ಆದರೆ ಈ ಸಂದರ್ಭ ಅವರು ನಮ್ಮ ಮನೆಗೆ ಭೇಟಿ ನೀಡಿದ್ದು ನನಗೆ ದೊಡ್ಡ ಸಂತೋಷವನ್ನು ನೀಡಿದೆ. ನಮ್ಮ ಪಕ್ಷದಿಂದ ಅವರಿಗೆ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.