ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಜಾವೆಲಿನ್ ಕ್ರೀಡೆಯಲ್ಲಿ ಹೊಸ ಸಂಚಲನ ತಂದಿರುವ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ, ಬೆಂಗಳೂರಿನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಜಾವೆಲಿನ್ ಟೂರ್ನಿ ‘ಎನ್‌ಸಿ ಕ್ಲಾಸಿಕ್ – 2025’ನಲ್ಲಿ ಭರ್ಜರಿ ಎಸೆತದ ಮೂಲಕ ಚಾಂಪಿಯನ್ ಪಟ್ಟ ಪಡೆದು ಮಿಂಚಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ನೀರಜ್ ಅವರು ಮೂರನೇ ಸುತ್ತಿನಲ್ಲಿ 86.18 ಮೀಟರ್ ದೂರ ಜಾವೆಲಿನ್ ಎಸೆದು ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಈ ಸ್ಪರ್ಧೆಯಲ್ಲಿ ಕೀನ್ಯದ ಜುಲಿಯಸ್ ಯೆಗೊ 84.51 ಮೀಟರ್ ಎಸೆತದೊಂದಿಗೆ ದ್ವಿತೀಯ ಸ್ಥಾನ, ಶ್ರೀಲಂಕಾದ ರುಮೇಶ್ ಪತಿರಾಜ್ 83.34 ಮೀಟರ್ ಎಸೆತದೊಂದಿಗೆ ತೃತೀಯ ಸ್ಥಾನ ಪಡೆದರು. ಭಾರತದ ಮತ್ತೊಬ್ಬ ಜಾವೆಲಿನ್ ಪಟು ಸಚಿನ್ ಯಾದವ್ 82.33 ಮೀಟರ್ ದೂರ ಎಸೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಎನ್‌ಸಿ ಕ್ಲಾಸಿಕ್‌ನ ಈ ಚೊಚ್ಚಲ ಆವೃತ್ತಿಯಲ್ಲಿ ಗೆದ್ದ ನೀರಜ್ ಚೋಪ್ರಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪದಕ ನೀಡಿ ಗೌರವಿಸಿದರು. ಈ ಮಾಹಿತಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಅವರು, “ಇದು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ. ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ನೀರಜ್ ಅವರದ್ದೇ ಮೇಲ್ಮೈ ಪ್ರದರ್ಶನ. ಮುಂದಿನ ಒಲಿಂಪಿಕ್ಸ್‌ಗೂ ಅವರು ಭಾರತದ ಗೌರವ ಹೆಚ್ಚಿಸಲಿ,” ಎಂದು ಶುಭ ಹಾರೈಸಿದರು.
ಈ ಸಂದರ್ಭಕ್ಕೆ ಗೃಹ ಸಚಿವ ಜಿ. ಪರಮೇಶ್ವರ್, ಶಾಸಕ ರಿಜ್ವಾನ್ ಅರ್ಷದ್ ಹಾಗೂ ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ. ಗೋವಿಂದರಾಜ್ ಉಪಸ್ಥಿತರಿದ್ದರು.
NEERAJ CHOPRA WINS NC CLASSIC 2025! 🏆
– The Winning Throw of 86.18m for G.O.A.T 🐐
pic.twitter.com/nPaJhHuJmk— The Khel India (@TheKhelIndia) July 5, 2025