ಹೊಸದಿಗಂತ ಡಿಜಿಟಲ್ ಡೆಸ್ಕ್:
NEET UG ಯಲ್ಲಿನ ಅಕ್ರಮ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿದ್ದು, ಪರೀಕ್ಷೆ ನಡೆಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಮಂಗಳವಾರ ಮತ್ತೆ ಸುಪ್ರೀಂ ಕೋರ್ಟ್ ಎನ್‌ಟಿಎಯನ್ನು ತರಾಟೆಗೆ ತೆಗೆದುಕೊಂಡಿದೆ.
ಯಾರ ಕಡೆಯಿಂದಾದರೂ ಶೇ. 0.001ರಷ್ಟು ನಿರ್ಲಕ್ಷ್ಯವಿದ್ದರೂ ಅದನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಎನ್‌ಟಿಎಗೆ ನೊಟೀಸ್ ನೀಡಿದೆ.
ಪ್ರಕರಣದ ಮುಂದಿನ ವಿಚಾರಣೆ ಜುಲೈ 8ರಂದು ನಡೆಯಲಿದೆ.
ನೀಟ್ ಯುಜಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ (ಕೃಪಾಂಕ) ಪಡೆದಿರುವ 1,563 ಅಭ್ಯರ್ಥಿಗಳಿಗೆ ಜೂನ್ 23ರಂದು ಮರು ಪರೀಕ್ಷೆ ನಡೆಸುವುದಾಗಿ ಎನ್ಟಿಎ ಜೂನ್ 13ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ನೀಟ್-ಯುಜಿ ಪರೀಕ್ಷೆಗೆ ಹಾಜರಾಗುವಾಗ ಅನುಭವಿಸಿದ ಸಮಯ ನಷ್ಟವನ್ನು ಸರಿದೂಗಿಸಲು ‘ಗ್ರೇಸ್ ಅಂಕ’ ಪಡೆದ 1,563ಕ್ಕೂ ಹೆಚ್ಚು ಅಭ್ಯರ್ಥಿಗಳ ಫಲಿತಾಂಶಗಳನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿದೆ ಎಂದೂ ಹೇಳಿದೆ. ಮರು ಪರೀಕ್ಷೆಗಳನ್ನು ಜೂನ್ 23ರಂದು ನಡೆಸಲಾಗುವುದು ಮತ್ತು ಜೂನ್ 30ರೊಳಗೆ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದಿರುವ ಎನ್ಟಿಎ ಮರುಪರೀಕ್ಷೆ ಬರೆಯಲು ಬಯಸದವರಿಗೆ ಗ್ರೇಸ್ ಮಾರ್ಕ್ ರಹಿತ ಅಂಕ ಹೊಂದುವ ಅವಕಾಶ ನೀಡಲಾಗಿದೆ ಎಂದು ಕೋರ್ಟ್‌ಗೆ ತಿಳಿಸಿದೆ.
2024ರ ಮೇ 5ರಂದು 14 ಅಂತಾರಾಷ್ಟ್ರೀಯ ಕೇಂದ್ರ ಸೇರಿದಂತೆ 571 ನಗರಗಳ 4,750 ಕಡೆಗಳಲ್ಲಿ ನಡೆದ ನೀಟ್ ಪರೀಕ್ಷೆಗೆ 24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳು ದೊರೆತಿರುವುದು ಭಾರೀ ಸುದ್ದಿಯಾಗಿ ವಿವಾದ ಭುಗಿಲೆದ್ದಿತ್ತು. ಅಲ್ಲದೆ 67 ಅಭ್ಯರ್ಥಿಗಳು 720ಕ್ಕೆ 720 ಅಂಕ ಪಡೆದಿರುವುದು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪಕ್ಕೆ ಇನ್ನಷ್ಟು ಪುಷ್ಟಿ ನೀಡಿತ್ತು. ಈ ಎಲ್ಲ ಕಾರಣಗಳಿಂದ ಹಲವು ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿ ಮರು ಪರೀಕ್ಷೆ ನಡೆಸಬೇಕೆಂದು ಮನವಿ ಸಲ್ಲಿಸಿದ್ದರು.