ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ 3 ರಂದು NEET-PG 2025 ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಒಪ್ಪಿಗೆ ನೀಡಿದೆ.
ಪರೀಕ್ಷೆಯನ್ನು ನಡೆಸಲು ರಾಷ್ಟ್ರೀಯ ಪರೀಕ್ಷಾ ಮಂಡಳಿ ಎರಡು ತಿಂಗಳಿಗಿಂತ ಹೆಚ್ಚು ಸಮಯ ಕೋರಿದ್ದನ್ನು ಆರಂಭದಲ್ಲಿ ಪ್ರಶ್ನಿಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ನ್ಯಾಯಪೀಠವು, ಆಗಸ್ಟ್ 3 ರಂದು NEET-PG 2025 ನ್ನು ನಡೆಸಬಹುದು ಎಂದು ಹೇಳಿದೆ.
ಅದಕ್ಕಿಂತ ಹೆಚ್ಚಿನ ಸಮಯವನ್ನು ನೀಡಲಾಗುವುದಿಲ್ಲ ಎಂದು ಕೂಡ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ಮೇ 30 ರ ಆದೇಶದ ಪ್ರಕಾರ, ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಲು ಸುಮಾರು 1,000 ಪರೀಕ್ಷಾ ಕೇಂದ್ರಗಳು ಬೇಕಾಗುತ್ತವೆ ಎಂದು NBE ವಾದಿಸಿತ್ತು.
ಜೂನ್ 15 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಆಗಸ್ಟ್ 3 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12.30 ರವರೆಗೆ ನಡೆಸುವುದಾಗಿ NBE ಅರ್ಜಿಯಲ್ಲಿ ತಿಳಿಸಿತ್ತು. ಇದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ (TCS) ನೀಡಿದ ಆರಂಭಿಕ ದಿನಾಂಕವಾಗಿದೆ. ಎನ್ ಬಿಇ ನೀಟ್ ಪಿಜಿ 2025 ನ್ನು ಆಗಸ್ಟ್ 3 ರಂದು ನಿಗದಿಪಡಿಸಲು ಅನುಮತಿಯನ್ನು ಕೋರಿತ್ತು.