ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಜನಪ್ರತಿನಿಧಿಗಳ ಕಡೆಗಣನೆ: ಪ.ಪಂ ಸದಸ್ಯರ ಅಸಮಾಧಾನ

ಹೊಸದಿಗಂತ ವರದಿ ಸೋಮವಾರಪೇಟೆ:

ಪಟ್ಟಣ ಪಂಚಾಯಿತಿಗೆ ಸೇರಿದ 60 ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಸದಸ್ಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ದಿನಾಂಕ ನಿಗದಿ, ಮಳಿಗೆ ಮೀಸಲಾತಿ ಸೇರಿದಂತೆ ಯಾವ ವಿಚಾರಕ್ಕೂ ಸದಸ್ಯರ ಅಭಿಪ್ರಾಯ ಪಡೆದಿಲ್ಲ ಹಾಗೂ ಸದಸ್ಯರ ಗಮನಕ್ಕೂ ತರದೆ ಏಕಾಏಕಿ ಅಧಿಕಾರಿಗಳು ಹರಾಜು ನಡೆಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಸದಸ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಹರಾಜು ಮುಂದೂಡುವಂತೆ ಮನವಿ ಅರ್ಪಿಸಿದ್ದಾರೆ.

ಸೆ.13ರಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿ ಸುದೀರ್ಘ ಚರ್ಚೆ ನಡೆದು ನಗರದ ಅಭಿವೃದ್ದಿ ಹಾಗೂ ವರ್ತಕರ ಹಿತದೃಷ್ಟಿಯಿಂದ ಸರ್ಕಾರದ ಅಭಿಪ್ರಾಯ ಪಡೆದು ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಮಾಡೋಣವೆಂದು ಹೇಳಲಾಗಿತ್ತು. ಆದರೆ ಇತ್ತೀಚೆಗೆ ಸಭೆಯ ನಿರ್ಣಯದಂತೆ ಹರಾಜು ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ. ನಂತರ ಕರೆದಿದ್ದ ಎರಡು ಸಭೆಗಳನ್ನೂ ಮುಂದೂಡಿದ್ದಾರೆ.

ಇದರಿಂದಾಗಿ ಸದಸ್ಯರ ಅಭಿಪ್ರಾಯ ತಿಳಿಸಲು ಅವಕಾಶವಾಗಿಲ್ಲ. ಆದ್ದರಿಂದ ಹಿಂದಿನ ಸಭೆಯ ನಿರ್ಣಯ ರದ್ದುಪಡಿಸಿ ಹಾಗೂ ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕು ಸಾಧ್ಯವಾದಷ್ಟು ಬೇಗ ಸಾಮಾನ್ಯ ಸಭೆ ಕರೆಯಬೇಕೆಂದು ಒತ್ತಾಯಿಸಿ ಹನ್ನೊಂದು ಮಂದಿ ಸದಸ್ಯರು ಸಹಿ ಮಾಡಿ ಮುಖ್ಯಾಧಿಕಾರಿಗೆ ಮನವಿ ನೀಡಿದರು.
ಈ ಬಗ್ಗೆ ಆಡಳಿತಾಧಿಕಾರಿಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು.
ಈ ಸಂದರ್ಭ ಮಾಜಿ ಅಧ್ಯಕ್ಷ ಪಿ.ಕೆ ಚಂದ್ರು, ಶೀಲಾ ಡಿಸೋಜ, ಜೀವನ್, ಮೃತ್ಯುಂಜಯ, ಶುಭಕರ, ಮೋಹಿನಿ, ಮಹೇಶ್ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!