October 11, 2026
Sunday, October 11, 2026
spot_img

ಪ್ಯಾಲೆಸ್ತೀನ್ ಹಕ್ಕುಗಳ ಕಡೆಗಣನೆ? ಮೋದಿ ಸರ್ಕಾರದ ವಿದೇಶಾಂಗ ನೀತಿ ಪ್ರಶ್ನಿಸಿದ ಸೋನಿಯಾ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತವು ಪ್ಯಾಲೆಸ್ತೀನ್ ಜನರ ಹಕ್ಕುಗಳ ಪರವಾಗಿದ್ದ ತನ್ನ ಐತಿಹಾಸಿಕ ನಿಲುವನ್ನು ಬದಿಗಿಟ್ಟು, ಇಸ್ರೇಲ್‌ನೊಂದಿಗೆ ಅತಿಯಾದ ನಿಕಟ ಸಂಬಂಧ ಬೆಳೆಸುತ್ತಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಪತ್ರಿಕೆಯೊಂದರಲ್ಲಿ ‘ಮೌನದ ಏಕೈಕ ಧ್ವನಿ’ ಎಂಬ ಶೀರ್ಷಿಕೆಯಡಿ ಲೇಖನ ಬರೆದಿರುವ ಅವರು, ಗಾಜಾ ಸಂಘರ್ಷದಲ್ಲಿ ಕೇಂದ್ರ ಸರ್ಕಾರದ ನಿಗೂಢ ಮೌನವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.

ಗಾಜಾ ನರಮೇಧದ ಭೀಕರತೆ

ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗದ ವರದಿಯನ್ನು ಉಲ್ಲೇಖಿಸಿರುವ ಸೋನಿಯಾ, ಗಾಜಾದಲ್ಲಿ ಇಸ್ರೇಲ್ ವ್ಯವಸ್ಥಿತ ನರಮೇಧ ಎಸಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಭೀಕರ ಸಂಘರ್ಷದಲ್ಲಿ ಈಗಾಗಲೇ 20,000ಕ್ಕೂ ಹೆಚ್ಚು ಅಮಾಯಕ ಮಕ್ಕಳು ಮೃತಪಟ್ಟಿದ್ದು, 44,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಈ ಮಾನವೀಯ ಸಂಕಟವನ್ನು ತಡೆಯುವಲ್ಲಿ ಅಂತಾರಾಷ್ಟ್ರೀಯ ಸಮುದಾಯ ಸಂಪೂರ್ಣ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.

ದೇಶದ ಹಿತಾಸಕ್ತಿಗೆ ಧಕ್ಕೆ

ಗಾಜಾ ನಾಗರಿಕರ ಪರವಾಗಿ ಧ್ವನಿ ಎತ್ತದ ಭಾರತ ಸರ್ಕಾರದ ನಿಲುವು ನೈತಿಕವಾಗಿ ಖಂಡನೀಯ ಮಾತ್ರವಲ್ಲ, ದೇಶದ ರಾಷ್ಟ್ರೀಯ ಹಿತಾಸಕ್ತಿ ಹಾಗೂ ಜಾಗತಿಕ ಗೌರವಕ್ಕೂ ಭಾರಿ ಧಕ್ಕೆ ಉಂಟುಮಾಡುತ್ತದೆ ಎಂದು ಸೋನಿಯಾ ಎಚ್ಚರಿಸಿದ್ದಾರೆ. ಭಾರತವು ಐತಿಹಾಸಿಕವಾಗಿ ಪ್ಯಾಲೆಸ್ತೀನ್‌ನ ಪರಮಾಪ್ತ ಮಿತ್ರ ರಾಷ್ಟ್ರವಾಗಿತ್ತು ಎಂಬುದನ್ನು ನೆನಪಿಸಿರುವ ಅವರು, ಸರ್ಕಾರ ತಕ್ಷಣವೇ ತನ್ನ ಮೌನ ಮುರಿದು ಪ್ಯಾಲೆಸ್ತೀನ್ ಜನರ ನ್ಯಾಯಯುತ ಹಕ್ಕುಗಳ ಪರವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.

Must Read