ಹೊಸದಿಗಂತ ಡಿಜಿಟಲ್ ಡೆಸ್ಕ್:
ದ್ವೀಪ ರಾಷ್ಟ್ರ ತೈವಾನ್ ಮತ್ತು ಭಾರತದ ನಡುವಿನ ಸಂದೇಶಗಳ ವಿನಿಮಯದ ಕುರಿತು ಟೀಕೆಗೆ ಮಾಡಿದ ಚೀನಾಗೆ ತೈವಾನ್ ಇಂದು (ಮಂಗಳವಾರ) ತಿರುಗೇಟು ನೀಡಿದೆ.
ಚೀನಾದ ಟೀಕೆಗಳಿಗೆ ತಮ್ಮ ಅಧ್ಯಕ್ಷರಾಗಲೀ ಅಥವಾ ಭಾರತದ ಪ್ರಧಾನಿ ನರೇಂದ್ರ ಮೋದಿಯಾಗಲೀ ಹೆದರುವುದಿಲ್ಲ ಎಂದು ತೈವಾನ್ ಉಪ ವಿದೇಶಾಂಗ ಸಚಿವ ಟಿಯೆನ್ ಚುಂಗ್-ಕ್ವಾಂಗ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ತೈವಾನ್ ಅಧ್ಯಕ್ಷ ಲಾಯ್ ಚಿಂಗ್ ಟೆ ನಡುವಿನ ಸಂದೇಶಗಳ ವಿನಿಮಯದ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿತ್ತು.
ಚೀನಾದ ಟೀಕೆಗಳಿಗೆ ಉತ್ತರಿಸಿಉಪ ವಿದೇಶಾಂಗ ಸಚಿವರು, ;ಮೋದಿಯವರು ಮತ್ತು ನಮ್ಮ ಅಧ್ಯಕ್ಷರು ಭಯಪಡುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ಕಳೆದ ತಿಂಗಳು ಚುನಾಯಿತರಾದ ತೈವಾನ್ ಅಧ್ಯಕ್ಷ ಲೈ ಚಿಂಗ್ ಟೆ ಅವರು ಜೂನ್ 7ರಂದು ಎಕ್ಸ್ ಪೋಸ್ಟ್‌ನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯ ವಿಜಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದರು. “ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಗೆಲುವಿಗಾಗಿ ನನ್ನ ಪ್ರಾಮಾಣಿಕ ಅಭಿನಂದನೆಗಳು. ವೇಗವಾಗಿ ಬೆಳೆಯುತ್ತಿರುವ ತೈವಾನ್-ಭಾರತದ ಪಾಲುದಾರಿಕೆಯನ್ನು ಹೆಚ್ಚಿಸಲು ನಾವು ಎದುರು ನೋಡುತ್ತಿದ್ದೇವೆ. ಇಂಡೋಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ವ್ಯಾಪಾರ, ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ನಮ್ಮ ಸಹಯೋಗವನ್ನು ವಿಸ್ತರಿಸುತ್ತೇವೆ” ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಈ ಸಂದೇಶಕ್ಕೆ ಪ್ರತ್ಯುತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ, “ನಿಮ್ಮ ಆತ್ಮೀಯ ಸಂದೇಶಕ್ಕಾಗಿ ಲೈ ಚಿಂಗ್ ಟೆ ಅವರಿಗೆ ಧನ್ಯವಾದಗಳು. ನಾವು ಪರಸ್ಪರ ಲಾಭದಾಯಕ ಆರ್ಥಿಕ ಮತ್ತು ತಾಂತ್ರಿಕ ಪಾಲುದಾರಿಕೆಗಾಗಿ ಕೆಲಸ ಮಾಡುವಾಗ ನಾನು ನಿಕಟ ಸಂಬಂಧಗಳನ್ನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದರು.
ಸಂದೇಶಗಳ ವಿನಿಮಯದ ನಂತರ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತೈವಾನ್‌ನೊಂದಿಗಿನ ಭಾರತದ ಸಂವಹನವನ್ನು ಟೀಕಿಸಿದರು. ಭಾರತವು ಈ ಬಗ್ಗೆ ಗಂಭೀರವಾದ ರಾಜಕೀಯ ಬದ್ಧತೆಗಳನ್ನು ಮಾಡಿದೆ. ತೈವಾನ್ ಅಧಿಕಾರಿಗಳ ರಾಜಕೀಯ ಲೆಕ್ಕಾಚಾರಗಳನ್ನು ಗುರುತಿಸಬೇಕು, ಎಚ್ಚರದಿಂದಿರಬೇಕು ಮತ್ತು ವಿರೋಧಿಸಬೇಕು ಎಂದಿದ್ದರು.