ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ಅಧ್ಯಕ್ಷ ರಾಮಚಂದ್ರ ಪೌಡೆಲ್ ತೀವ್ರ ಅಸ್ವಸ್ಥರಾಗಿದ್ದು, ಮಂಗಳವಾರ ಉಸಿರಾಟದ ಮಟ್ಟ ಕಡಿಮೆಯಾದ ಕಾರಣ, ಅವರನ್ನು ಕಠ್ಮಂಡುವಿನ ಮಹಾರಾಜ್‌ಗಂಜ್ ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರಿಗೆ ಶ್ವಾಸಕೋಶದಲ್ಲಿ ಸೋಂಕು ಇರುವುದು ಪತ್ತೆಯಾಯಿತು.
ಉತ್ತಮ ಚಿಕಿತ್ಸೆಗಾಗಿ ಅವರನ್ನು ಬುಧವಾರ ದೆಹಲಿ ಏಮ್ಸ್‌ಗೆ ಸ್ಥಳಾಂತರಿಸಲಾಗಿದೆ ಎಂದು ಪೌಡೆಲ್ ಸಲಹೆಗಾರ ಸ್ಪಷ್ಟಪಡಿಸಿದ್ದಾರೆ. ʻಅಧ್ಯಕ್ಷರಿಗೆ ಆಮ್ಲಜನಕದ ಪ್ರಮಾಣ ಕಡಿಮೆಯಾದ ತಕ್ಷಣ ನಾವು ಅವರನ್ನು ಆಸ್ಪತ್ರೆಗೆ ಸೇರಿಸಿದೆವು. ಕಳೆದ 15 ದಿನಗಳಿಂದ ಆ್ಯಂಟಿಬಯೋಟಿಕ್ಸ್ ಸೇವಿಸುತ್ತಿದ್ದಾರೆ. ಆದರೆ, ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲʼ ಎಂದರು. ಪೌಡೆಲ್ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿದ ಪ್ರಧಾನಿ ಪುಷ್ಪ ಕಮಲ್ ದಹಲ್ ಆಸ್ಪತ್ರೆಗೆ ತೆರಳಿದ್ದಾರೆ.
ಒಂದು ತಿಂಗಳೊಳಗೆ ಪೌಡೆಲ್ ಆಸ್ಪತ್ರೆಗೆ ದಾಖಲಾಗಿರುವುದು ಇದು ಎರಡನೇ ಬಾರಿ. ಕಳೆದ ವಾರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅವರ ಚಿಕಿತ್ಸೆಗೆ ಸರ್ಕಾರಿ ಅಧಿಕಾರಿಗಳನ್ನು ನೇಮಿಸಲು ನಿರ್ಧರಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಕುರಿತು ಅಧಿಕಾರಿಗಳ ತಂಡ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದೆ. ವರದಿ ಆಧರಿಸಿ ಚಿಕಿತ್ಸೆ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಏತನ್ಮಧ್ಯೆ, ರಾಮಚಂದ್ರ ಪೌಡೆಲ್ ಅವರು ಮಾರ್ಚ್ 10 ರಂದು ನೇಪಾಳದ ಅಧ್ಯಕ್ಷರಾಗಿ ಆಯ್ಕೆಯಾದರು. ಇದೇ ತಿಂಗಳ 13ರಂದು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.