ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಭುವನೇಶ್ವರದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ ನೇಪಾಳಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸದ್ಯ ಎರಡು ದೇಶಗಳ ನಡುವೆ ಸಮಸ್ಯೆ ತಲೆದೂರಿದೆ.
ಆತ್ಮಹತ್ಯೆಯಿಂದ ಕೆರಳಿರುವ 500 ಕ್ಕೂ ಅಧಿಕ ನೇಪಾಳಿ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ KIIT ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಏತನ್ಮಧ್ಯೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿದ ಆಡಳಿತ ಮಂಡಳಿಯ ಸದಸ್ಯರನ್ನು ಅಮಾನತು ಮಾಡಲಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಮೃತ ವಿದ್ಯಾರ್ಥಿನಿಯ ತಂದೆ ಸುನಿಲ್ ಲಾಮ್ಸಲ್ ಅವರು, “ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಆದರೆ ಇನ್ನೂ ಅನೇಕ ನೇಪಾಳಿ ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಇನ್ನು ಪ್ರತಿಭಟನೆ ನಡೆಸಿದ ಕೆಲವು ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಲಾಗಿದೆ. ಇದು ಸರಿಯಲ್ಲ. ಇಂತಹ ಘಟನೆ ಭವಿಷ್ಯದಲ್ಲಿ ಮತ್ತೆ ಸಂಭವಿಸಬಾರದು. ಆಡಳಿತ ಮಂಡಳಿ ನೇಪಾಳಕ್ಕೆ ಬಂದು ವಿದ್ಯಾರ್ಥಿಗಳನ್ನು ಇಲ್ಲಿ ಅಧ್ಯಯನ ಮಾಡಲು ಕರೆಯುತ್ತಾರೆ. ಆದರೆ ಆಗಮಿಸಿದ ನಂತರ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇನ್ನು ಮೃತ ವಿದ್ಯಾರ್ಥಿನಿ ಪ್ರಕೃತಿಯ ಮಾಜಿ ಗೆಳೆಯ ಅದ್ವಿಕ್ ಶ್ರೀವಾಸ್ತವ ನೀಡಿದ ಕಿರುಕುಳವೇ ಆಕೆಯನ್ನು ಈ ಭೀಕರ ಕೃತ್ಯಕ್ಕೆ ದೂಡಿದೆ ಎಂದು ಆಕೆಯ ಸ್ನೇಹಿತರು ಆರೋಪಿಸಿದ್ದಾರೆ. ಆಕೆಯ ಸಹೋದರ ಕೂಡ ಈ ಕಿರುಕುಳದ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದಾರೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 108 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಲಾಗಿದೆ. ಇದರೊಂದಿಗೆ ಸದ್ಯ ಅದ್ವಿಕ್ ಮತ್ತು ಪ್ರಕೃತಿ ನಡುವಿನ ಸಂಭಾಷಣೆಯನ್ನು ಒಳಗೊಂಡ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೆಕಾರ್ಡಿಂಗ್‌ನಲ್ಲಿ, ಯುವಕನೊಬ್ಬ ಮಹಿಳೆಗೆ ನಿಂದನೀಯ ಭಾಷೆ ಬಳಸಿ ಕಿರುಕುಳ ನೀಡುತ್ತಿರುವುದು ಕೇಳಿಸುತ್ತದೆ.
ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ಸಹಕಾರ
ಇನ್ನು ಘಟನೆಯ ಕುರತು ಪ್ರತಿಕ್ರಿಯಿಸಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು, “ಒಡಿಶಾದಲ್ಲಿ ತೊಂದರೆಗೊಳಗಾದ ನೇಪಾಳಿ ವಿದ್ಯಾರ್ಥಿಗಳಿಗೆ ಸಹಕರಿಸಲು ನವದೆಹಲಿಯಲ್ಲಿರುವ ನಮ್ಮ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಕಳುಹಿಸಲಾಗಿದೆ. ಹೆಚ್ಚುವರಿಯಾಗಿ, ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‌ನಲ್ಲಿಯೇ ಉಳಿಯಲು ಅಥವಾ ಅವರ ಆದ್ಯತೆಯ ಆಧಾರದ ಮೇಲೆ ಮನೆಗೆ ಮರಳಲು ಅವಕಾಶ ಕಲ್ಪಿಸಲಾಗಿದೆ” ಎಂದು ಓಲಿ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಬರೆದಿದ್ದಾರೆ.
ಇನ್ನು ಘಟನೆಯ ಕುರಿತು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ವಿಧ್ಯರ್ಥಿಗಳಿಗೆ ಆಡಳಿತ ಮಂಡಳಿಯ ಸದಸ್ಯರು ಧಮ್ಕಿ ಹಾಕಿದ್ದಾರೆ. ಸದ್ಯ ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ವೀಡಿಯೊದಲ್ಲಿ, ಇಬ್ಬರು ವಿಶ್ವವಿದ್ಯಾಲಯದ ಅಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ಕೂಗುತ್ತಿರುವುದು ಕೇಳಿಬಂದಿದೆ.