ಹೊಸದಿಗಂತ ವರದಿ ಶಿವಮೊಗ್ಗ:
ಮಹಾನಗರ ಪಾಲಿಕೆಯ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಕ್ರೆಬೈಲು ಆನೆ ಬಿಡಾರದ ಹೆಣ್ಣಾನೆಯೊಂದು ಸೋಮವಾರ ರಾತ್ರಿ ಮರಿ ಹಾಕಿದೆ.
ಮರಿ ಮತ್ತು ಆನೆ ಎರಡೂ ಆರೋಗ್ಯವಾಗಿದ್ದು, ಮಂಗಳವಾರ ಬೆಳಿಗ್ಗೆಯೇ ಸಕ್ರೆಬೈಲು ಆನೆ ಬಿಡಾರಕ್ಕೆ ರವಾನಿಸಲಾಯಿತು.
ಮಂಗಳವಾರ ಮಧ್ಯಾಹ್ನ ಜಂಬೂ ಸವಾರಿಯಲ್ಲಿ ಆನೆ ನೇತ್ರಾವತಿ ಪಾಲ್ಗೊಳ್ಳಬೇಕಿತ್ತು. ಆದರೆ ಸೋಮವಾರ ರಾತ್ರಿಯೇ ಆನೆ ಹೆಣ್ಣುಮರಿಗೆ ಮರಿಗೆ ಜನ್ಮ ನೀಡಿದೆ. ಗರ್ಭಿಣಿ ಆನೆಯನ್ನು ಜಂಬೂ ಸವಾರಿಗೆ ಕಳಿಸಿರುವ ಅರಣ್ಯ ಇಲಾಖೆ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ನಗರದಲ್ಲಿ ನಡೆಯುವ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಮಹಾನಗರ ಪಾಲಿಕೆಯಿಂದ ಸಕ್ರೆಬೈಲು ಆನೆ ಬಿಡಾರದ ಆನೆಗಳಿಗೆ ತಿಂಗಳ ಹಿಂದೆಯೇ ಆಹ್ವಾನ ನೀಡಲಾಗಿತ್ತು. ಅದರಂತೆ ಚಾಮುಂಡೇಶ್ವರಿ ವಿಗ್ರಹ ಹೊತ್ತು ಜಂಬೂ ಸವಾರಿಯಲ್ಲಿ ಸಾಗಲು ಸಾಗರ, ನೇತ್ರಾವತಿ ಮತ್ತು ಹೇಮಾವತಿ ಆನೆಗಳನ್ನು ಕರೆತರಲಾಗಿತ್ತು.
ಮೂರು ದಿನಗಳ ಹಿಂದೆ ನಗರಕ್ಕೆ ಆಗಮಿಸಿದ ಗಜಪಡೆ, ಕೋಟೆ ರಸ್ತೆಯ ವಾಸವಿ ಶಾಲೆ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು. ಸೋಮವಾರ ಜಂಬೂಸವಾರಿ ಸಾಗುವ ಮೆರವಣಿಗೆಯಲ್ಲಿ ಆನೆಗಳು ತಾಲೀಮು ನಡೆಸಿದ್ದವು. ಬಳಿಕ ರಾತ್ರಿ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.
ಮೈಸೂರಿಗೆ ಬಂದಿತ್ತು ಆಹ್ವಾನ!
ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಸಕ್ರೆಬೈಲು ಆನೆ ಬಿಡಾರದ ಆನೆಗಳನ್ನು ಕೂಡ ಪರೀಕ್ಷಿಸಲಾಗಿತ್ತು. ಆ ಸಮಯದಲ್ಲಿ ನೇತ್ರಾವತಿ ಗರ್ಭಿಣಿ ಆಗಿರುವುದು ಪತ್ತೆ ಆಗಿರಲಿಲ್ಲ ಎಂದು ಆನೆ ಬಿಡಾರದ ವೈದ್ಯ ಡಾ.ವಿನಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶಿವಮೊಗ್ಗ ದಸರಾ ಮೆರವಣಿಗೆಗೆ ನೇತ್ರಾವತಿ ಬೇಕಿದ್ದುದರಿಂದ ಮೈಸೂರಿಗೆ ಕಳಿಸಿರಲಿಲ್ಲ ಎಂದರು.