ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡದಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದ್ದು, ಉಪ್ಪಿನಂಗಡಿಯಲ್ಲಿ ನೇತ್ರಾವತಿ- ಕುಮಾರಧಾರೆ ನದಿಗಳ ಸಂಗಮವಾಗಿದೆ.
ಸತತ ಮಳೆಯಿಂದಾಗಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡು ಉಕ್ಕಿ ಹರಿದು ಮಂಗಳವಾರದಂದು ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ನದಿಗಳೆರಡು ಪುನರಪಿ ಸಂಗಮಿಸಿ ಬಾಗಿನ ಸಮರ್ಪಣಾ , ಗಂಗಾ ಪೂಜಾ ಹಾಗೂ ಪವಿತ್ರ ಸಂಗಮ ತೀರ್ಥ ಸ್ನಾನ ಜರುಗಿತು.
ಮಂಗಳವಾರ ಮಧ್ಯಾಹ್ನದಿಂದ ಅಪಾಯದ ಮಟ್ಟವನ್ನು ಮೀರಿ ಹರಿದ ನೇತ್ರಾವತಿಯು ದೇವಾಲಯದ ಮಹಾಕಾಳಿ ಅಮ್ಮನವರ ಗುಡಿಯನ್ನು ಆವರಿಸಿ ಹರಿಯತೊಡಗಿತು. ಬಳಿಕ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗಕ್ಕೆ ವಿಸ್ತರಿಸಿ ಹರಿಯತೊಡಗಿದ ನೇತ್ರಾವತಿ ಸಾಯಂಕಾಲ 6 ಗಂಟೆಯ ವರೆಗೆ ಏಕತ್ರವಾಗಿ ದೇವಾಲಯದ ಪ್ರಾಂಗಣವನ್ನು ಪ್ರವೇಶಿಸಿತು. ಅಷ್ಠರವರೆಗೆ ಸ್ವಲ್ಪ ಮಟ್ಟಿನ ಇಳಿಮುಖದಲ್ಲಿ ಹರಿಯ ತೊಡಗಿದ ಕುಮಾರಧಾರಾ ನದಿಯು ಬಳಿಕ ಏರಿಕೆಯ ಗತಿಯನ್ನು ಕಂಡು ದೇವಾಲಯದ ಪ್ರಾಂಗಣಕ್ಕೆ ಹರಿಯತೊಡಗಿತು.
ಈ ಮಧ್ಯೆ ದೇವಾಲಯಕ್ಕೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ ನದಿಗೆ ಬಾಗಿನ ಸಮರ್ಪಿಸಿದರು. ಮುಖಂಡರುಗಳಾದ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ, ತಹಶೀಲ್ದಾರ್ ಪುರಂದರ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯರಾದ ದೇವಿದಾಸ್ ರೈ ,ಅರ್ತಿಲ ಕೃಷ್ಣ ರಾವ್, ವೆಂಕಪ್ಪ ಪೂಜಾರಿ, ರಮ್ಯಾ ರಾಜಾರಾಮ್, ಹರೀಶ್ ಉಪಾಧ್ಯಾಯ ಮೊದಲಾದವರು ಸ್ಥಳದಲ್ಲಿ ಉಪಸ್ಥಿತರಿದ್ದರು.
ಸಂಗಮ ವೀಕ್ಷಣೆಗೆ ಆಗಮಿಸಿದ ಜನ ಸಾಗರ
ಈ ಬಾರಿ ನದಿಗಳೆರಡು ದೇವಳದ ಮುಂಭಾಗದಲ್ಲಿ ಪುನರಪಿ ಸಂಗಮಿಸಿ ಪವಿತ್ರ ಸಂಗಮ ಪೂಜೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ದೇವಳದತ್ತ ಆಗಮಿಸಿದರು.