ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೇಟರ್ ಬೆಂಗಳೂರು ಆಡಳಿತ ಮಂಡಳಿಯ ಸದಸ್ಯರ ಪಟ್ಟಿಯನ್ನು ವಿಸ್ತರಿಸಲು ಮತ್ತು ಸಣ್ಣ ಲೋಪಗಳನ್ನು ಸರಿಪಡಿಸಲು ರಾಜ್ಯ ಸರ್ಕಾರವು ಇಂದು ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ (2ನೇ ತಿದ್ದುಪಡಿ) 2024 ಅನ್ನು ಮಂಡಿಸಿತು.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧೇಯಕ ಮಂಡಿಸಿ ಮಾತನಾಡಿ, GBA ಸದಸ್ಯರ ಪಟ್ಟಿಯಿಂದ ಕೆಲವು ಪ್ರಮುಖ ವ್ಯಕ್ತಿಗಳು ಬಿಟ್ಟುಹೋಗಿರುವುದನ್ನು ಗಮನಿಸಿರುವುದಾಗಿ ತಿಳಿಸಿದರು.
ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಮತ್ತು ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ಅವರ ಕ್ಷೇತ್ರದ ಕೆಲ ಭಾಗಗಳು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿರುವುದರಿಂದ ಅವರನ್ನು GBA ಸದಸ್ಯರನ್ನಾಗಿ ಸೇರಿಸಲಾಗಿದೆ.
GBA ವ್ಯಾಪ್ತಿಯ ನಿವಾಸಿಗಳಾಗಿದ್ದರೂ ಪಟ್ಟಿಯಿಂದ ಬಿಟ್ಟುಹೋಗಿದ್ದ ಸ್ಥಳೀಯ ಜನಪ್ರತಿನಿಧಿಗಳು, ಹಾಗೂ ವಿಧಾನ ಪರಿಷತ್ ಸದಸ್ಯರನ್ನೂ ಈಗ ಮಂಡಳಿಯ ಸದಸ್ಯರನ್ನಾಗಿ ಸೇರಿಸಲಾಗಿದೆ.
ಮುಖ್ಯಮಂತ್ರಿಗಳು GBA ಮುಖ್ಯಸ್ಥರಾಗಿರುವ ಹಿನ್ನೆಲೆಯಲ್ಲಿ, ಸಮನ್ವಯಕ್ಕಾಗಿ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಇಲಾಖೆ ಕಾರ್ಯದರ್ಶಿಗಳನ್ನೂ ಸದಸ್ಯರನ್ನಾಗಿ ಸೇರಿಸಲಾಗಿದೆ.
ಇತ್ತೀಚೆಗೆ ನಡೆದ GBA ಮೊದಲ ಸಭೆಯ ಸಂದರ್ಭದಲ್ಲಿ ಈ ಸದಸ್ಯರ ಲೋಪವನ್ನು ಗಮನಿಸಲಾಯಿತು ಎಂದು ಸಚಿವರು ವಿವರಿಸಿದರು. ವಿರೋಧ ಪಕ್ಷದ ಸದಸ್ಯರು ತಮ್ಮ ರಾಜಕೀಯ ನಿಲುವಿನ ಕಾರಣದಿಂದಾಗಿ ಸಭೆಯಲ್ಲಿ ಭಾಗವಹಿಸದೇ ಇದ್ದುದನ್ನೂ ಅವರು ಪ್ರಸ್ತಾಪಿಸಿದರು. ಈ ತಿದ್ದುಪಡಿಯು GBA ಕಾರ್ಯನಿರ್ವಹಣೆಯನ್ನು ಹೆಚ್ಚು ಸಮಗ್ರಗೊಳಿಸಲಿದೆ ಎಂದು ಶಿವಕುಮಾರ್ ತಿಳಿಸಿದರು.

