Wednesday, November 12, 2025

ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಸಿಚುವಾನ್‌ನ ಹೊಸ ಸೇತುವೆ ಪತನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯ ಚೀನಾವನ್ನು ಟಿಬೆಟ್‌ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದ್ದ, ಹೊಸದಾಗಿ ನಿರ್ಮಿಸಲಾದ ಬೃಹತ್ ಹಾಂಗ್‌ಕ್ವಿ ಸೇತುವೆಯ ಒಂದು ಭಾಗ ಮಂಗಳವಾರ ಅನಿರೀಕ್ಷಿತವಾಗಿ ಕುಸಿದು ಬಿದ್ದಿದೆ. ಕೇವಲ ಕೆಲವು ತಿಂಗಳ ಹಿಂದಷ್ಟೇ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದ್ದ 758 ಮೀಟರ್ ಉದ್ದದ ಈ ಸೇತುವೆ ಕುಸಿದು ಬೀಳುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಚೀನಾದ ನಿರ್ಮಾಣ ಗುಣಮಟ್ಟದ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಏನಾಯಿತು?

Weather monitor ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಸಿಚುವಾನ್ ಪ್ರಾಂತ್ಯದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ‘ಹಾಂಗ್‌ಕ್ವಿ ಸೇತುವೆ’ಯ ಭಾಗವು ಕುಸಿಯುವ ಭೀಕರ ದೃಶ್ಯವಿದೆ. ಸೆಪ್ಟೆಂಬರ್‌ನಲ್ಲಿ ಸಂಚಾರಕ್ಕೆ ಮುಕ್ತವಾಗಿದ್ದ ಈ ಸೇತುವೆ, ಉದ್ಘಾಟನೆಯಾದ ಕೆಲವೇ ತಿಂಗಳುಗಳಲ್ಲಿ ಕುಸಿದಿರುವುದು ವಿಪರ್ಯಾಸ.

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಮೇರ್ಕಾಂಗ್‌ನ ಅಧಿಕಾರಿಗಳು ಕುಸಿತದ ಒಂದು ದಿನ ಮೊದಲೇ ಸೇತುವೆಯ ಬಳಿಯ ಇಳಿಜಾರು ಮತ್ತು ರಸ್ತೆಗಳಲ್ಲಿ ಬಿರುಕುಗಳನ್ನು ಗುರುತಿಸಿದ್ದರು. ಭೂಪ್ರದೇಶದಲ್ಲಿನ ಬದಲಾವಣೆಗಳನ್ನು ಗಮನಿಸಿದ ತಕ್ಷಣ, ಸಂಭಾವ್ಯ ಅಪಾಯವನ್ನು ತಪ್ಪಿಸಲು ಸೇತುವೆಯ ಸಂಚಾರವನ್ನು ಸಂಪೂರ್ಣವಾಗಿ ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈ ಮುನ್ನೆಚ್ಚರಿಕೆಯ ಕ್ರಮದಿಂದಾಗಿ ಪ್ರಾಣಹಾನಿ ತಪ್ಪಿದೆ ಎಂದು ಹೇಳಲಾಗಿದೆ.

ಸಂಚಾರ ನಿಷೇಧಿಸಿದ ಮರುದಿನ, ಪರ್ವತದ ಇಳಿಜಾರಿನ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿತು. ಇದರಿಂದಾಗಿ ಭಾರೀ ಭೂಕುಸಿತಗಳು ಸಂಭವಿಸಿದ್ದು, ಇದೇ ಕಾರಣದಿಂದ ಹಾಂಗ್‌ಕ್ವಿ ಸೇತುವೆಯ ಒಂದು ಭಾಗ ಕುಸಿಯಲು ಕಾರಣವಾಯಿತು ಎಂದು ವರದಿಯಾಗಿದೆ. ಈ ಸೇತುವೆಯ ನಿರ್ಮಾಣವು ಶುವಾಂಗ್‌ಜಿಯಾಂಗ್‌ಕೌ ಅಣೆಕಟ್ಟು ಯೋಜನೆಗೆ ಸಂಬಂಧಿಸಿದೆ ಎಂದು ತಿಳಿದು ಬಂದಿದೆ.

ನೆಟ್ಟಿಗರ ಪ್ರತಿಕ್ರಿಯೆ:

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕ ಬಳಕೆದಾರರು ಈ ಘಟನೆಯ ಕುರಿತು ವ್ಯಂಗ್ಯ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ.

ಒಬ್ಬ ಬಳಕೆದಾರರು, “ಪರ್ವತದ ಮೇಲಿನ ಅಪಾಯದ ಮೌಲ್ಯ ಮಾಪನಗಳು ಈ ಯೋಜನೆ ವಿಫಲವಾಗಲು ಮುಖ್ಯ ಕಾರಣ” ಎಂದು ಟೀಕಿಸಿದ್ದಾರೆ.

ಇನ್ನೊಬ್ಬರು, “ಶುವಾಂಗ್‌ಜಿಯಾಂಗ್‌ಕೌ ಸಿಚುವಾನ್ ಪ್ರಾಂತ್ಯದಲ್ಲಿ ಭಾಗಶಃ ಕುಸಿದ ಹಾಂಗ್ಕಿ ಸೇತುವೆ ಕೇವಲ 10 ರಿಂದ 11 ತಿಂಗಳುಗಳ ಕಾಲ ಬಳಕೆಯಲ್ಲಿತ್ತು. ಸೇತುವೆ 2024 ರಲ್ಲಿ ಪೂರ್ಣಗೊಂಡಿತು” ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, “ಇದು ಚೀನಾದಲ್ಲಿ ನಿರ್ಮಾಣವಾಗಿದ್ದರಿಂದ ಕುಸಿದೇ ಬಿಡ್ತು” ಎಂದು ನೇರವಾಗಿ ನಿರ್ಮಾಣದ ಗುಣಮಟ್ಟದ ಕುರಿತು ವ್ಯಂಗ್ಯವಾಡಿದ್ದಾರೆ.

ಈ ಘಟನೆಯು ಚೀನಾದ ಮೂಲಸೌಕರ್ಯ ಯೋಜನೆಗಳ ಗುಣಮಟ್ಟ ಮತ್ತು ಭೌಗೋಳಿಕ ಅಪಾಯಗಳ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

error: Content is protected !!