ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ದಸರಾ ಆಚರಣೆಯನ್ನು ಹೊಸ ಮುಖ್ಯಮಂತ್ರಿ ಮಾಡಲಿದ್ದಾರೆ ಎಂಬುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.
ಮೈಸೂರಿನ ವಿಜಯನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಅಪಾಯಕಾರಿ, ಆದರೆ ಅಧಿಕಾರದಲ್ಲಿ ಇಲ್ಲವಾದರೆ ಇನ್ನಷ್ಟು ಅಪಾಯಕಾರಿ ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಎಂದು ಹೇಳುತ್ತಾರೆ. ಆದರೆ ಇದೇ ಕಾಂಗ್ರೆಸ್ನವರು ತುರ್ತು ಪರಿಸ್ಥಿತಿ ಹೇರಿದ್ದರು. ಆಗಿನಂತೆ ಈಗ ಯಾವ ಪತ್ರಿಕೆ ಮುಚ್ಚಿದ್ದಾರೆ, ನ್ಯಾಯಾಂಗದ ಮೇಲೆ ಎಲ್ಲಿ ಒತ್ತಡ ಹೇರಿದ್ದಾರೆ, ಯಾವಾಗ ಚುನಾವಣೆ ಮುಂದೂಡಿದ್ದಾರೆ ಎಂದು ತಿಳಿಸಲಿ ಎಂದರು.
ಬಿಜೆಪಿಯಿಂದ ಸಂವಿಧಾನ ಬದಲಾಗುತ್ತದೆ ಎಂದು ಟೀಕಿಸುತ್ತಾರೆ. ಆದರೆ ತುರ್ತು ಪರಿಸ್ಥಿತಿಗಾಗಿ ಕಾಂಗ್ರೆಸ್ನವರೇ ಸಂವಿಧಾನ ತಿದ್ದುಪಡಿ ಮಾಡಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಕಾಂಗ್ರೆಸ್ನವರ ಮನೆ ಆಸ್ತಿ ಎಂದುಕೊಂಡಿದ್ದಾರೆ. ಅಂಬೇಡ್ಕರ್ ಸತ್ತಾಗ ಅವರ ಸಮಾಧಿಗೆ ಜಾಗ ನೀಡಲಿಲ್ಲ. ಇಂದಿರಾಗಾಂಧಿ ಕುಟುಂಬದವರು ಸತ್ತಾಗ ಮಾತ್ರ ಸಮಾಧಿಗೆ ಜಾಗ ನೀಡಿದ್ದರು. ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಂಬೇಡ್ಕರ್ಗೆ ಭಾರತರತ್ನ ನೀಡಲಾಯಿತು. ಈ ಎಲ್ಲ ವಿಷಯಗಳನ್ನು ಜನರಿಗೆ ತಿಳಿಸಬೇಕು ಎಂದರು.