ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರು ಅಗಲಿ ನಾಲ್ಕು ವರ್ಷಗಳಾದರೂ, ಅವರ ನೆನಪುಗಳು ಇಂದಿಗೂ ಕನ್ನಡಿಗರ ಹೃದಯದಲ್ಲಿ ಜೀವಂತವಾಗಿವೆ. ಅಪ್ಪು ಅವರ ಸಿನಿಮಾಗಳು, ಹಾಡುಗಳು ಹಾಗೂ ಸಾಮಾಜಿಕ ಸೇವೆಯು ಅವರನ್ನು ಜನಮನಗಳಲ್ಲಿ ಶಾಶ್ವತವಾಗಿ ಅಚ್ಚಳಿಯದಂತೆ ಮಾಡಿವೆ. ಇದೀಗ ಅಪ್ಪು ಅವರನ್ನು ಅಮರರನ್ನಾಗಿ ಉಳಿಸುವ ಉದ್ದೇಶದಿಂದ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಸ ಪ್ರಯತ್ನವೊಂದನ್ನು ಆರಂಭಿಸಿದ್ದಾರೆ.
ಅಶ್ವಿನಿ ಅವರು ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥವಾಗಿ ‘ಪಿಆರ್‌ಕೆ’ ಎಂಬ ಹೆಸರಿನ ಅಪ್ಲಿಕೇಶನ್ ಬಿಡುಗಡೆಗೆ ಮಾಡೋಕೆ ಸಜ್ಜಾಗಿದ್ದಾರೆ. ಅವರ ಜೊತೆ ಕೆಲಸ ಮಾಡುತ್ತಿರುವ ಉತ್ಸಾಹಿ ತಂಡ ಈಗಾಗಲೇ ಆ್ಯಪ್ ಅಭಿವೃದ್ಧಿಪಡಿಸಿದ್ದು, ಅಪ್ಪು ಅವರ ಪುಣ್ಯಸ್ಮರಣೆಯ ದಿನವಾದ ಅಕ್ಟೋಬರ್ 29ರಂದು ಲೋಕಾರ್ಪಣೆ ಮಾಡುವ ಯೋಜನೆ ಇದೆ. ಅಕ್ಟೋಬರ್ 25 ಕ್ಕೆ ಅಪ್ಪು ಆ್ಯಪ್ ಕುರಿತು ಸುದ್ದಿಗೋಷ್ಠಿ ಇದ್ದು ಅಂದೇ ಡಿಸಿಎಂ ಡಿಕೆಶಿವಕುಮಾರ್ ಅಪ್ಪು ಆ್ಯಪ್ ಸಾಫ್ಟ್ ಲಾಂಚ್ ಮಾಡಲಿದ್ದಾರೆ.
ಈ ಅಪ್ಲಿಕೇಶನ್‌ನಲ್ಲಿ ಪುನೀತ್ ಅವರ ಸಿನೆಮಾ ಜೀವನ, ಸಾಧನೆಗಳು, ಮಾನವೀಯ ಮೌಲ್ಯಗಳು ಹಾಗೂ ಸಮಾಜ ಸೇವೆಯ ಮಾಹಿತಿ ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ.
ಇದೇ ಸಂದರ್ಭದಲ್ಲಿ ಅಪ್ಲಿಕೇಶನ್‌ನಲ್ಲಿ ಅಂಗಾಂಗ ದಾನ, ಶಿಕ್ಷಣ ಮತ್ತು ಆರೋಗ್ಯ ಸಂಬಂಧಿತ ಸೇವೆಗಳ ಮಾಹಿತಿಯನ್ನೂ ಸೇರಿಸಲು ಯೋಜಿಸಲಾಗಿದೆ. ಅಶ್ವಿನಿ ಅವರು ಈ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕುಟುಂಬದ ಸದಸ್ಯರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರನ್ನು ಆಹ್ವಾನಿಸಿದ್ದಾರೆ.