ಪಿಲಿಕುಳ ಮೃಗಾಲಯಕ್ಕೆ ಬಂದ ಹೊಸ ಅತಿಥಿ!

ಹೊಸದಿಗಂತ ವರದಿ, ಮಂಗಳೂರು:

ಪಿಲಿಕುಳ ಮೃಗಾಲಯಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಇಲ್ಲಿರುವ ಹುಲಿಗಳ ಜೊತೆಗೆ ಬಿಳಿ ಹುಲಿಯೊಂದು ಸೇರ್ಪಡೆಯಾಗಿದ್ದು, ಪಿಲಿಕುಳದ ಆಕರ್ಷಣೆಯ ಕೇಂದ್ರವಾಗಿದೆ.
ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಚೆನ್ನೈನ ಅರಿಗರ್ ಅಣ್ಣ ಮೃಗಾಲಯದಿಂದ ಒಂದು ಬಿಳಿ ಹೆಣ್ಣು ಹುಲಿ `ಕಾವೇರಿ’ ಮತ್ತು ಹೆಣ್ಣು ಉಷ್ಟ್ರ ಪಕ್ಷಿಯನ್ನು ತರಿಸಿಕೊಳ್ಳಲಾಗಿದೆ. ಅದೇ ರೀತಿ ಪಿಲಿಕುಳ ಮೃಗಾಲಯದಿಂದ ಒಂದು ಬೆಂಗಾಲ್ ಹುಲಿ `ಸಂಜಯ್’, ನಾಲ್ಕು ಕಾಡುನಾಯಿಗಳು ಮತ್ತು ಕೆಲವು ಉರಗಗಳನ್ನು ಕಳುಹಿಸಿ ಕೊಡಲಾಗಿದೆ. ಪಿಲಿಕುಳದಲ್ಲಿ ಈಗಾಗಲೇ ಹನೊಂದು ಹುಲಿಗಳು (ಏಳು ಗಂಡು ನಾಲ್ಕು ಹೆಣ್ಣು) ಮತ್ತು ಎರಡು ಗಂಡು ಉಷ್ಟ್ರಪಕ್ಷಿಗಳಿವೆ.
ಹೊಸ ಅತಿಥಿಯಾಗಿ ಆಗಮಿಸಿರುವ ಬಿಳಿ ಹುಲಿಯನ್ನು ಕ್ವಾರಂಟೈನ್‌ನಲ್ಲಿ ಪ್ರತ್ಯೇಕಿಸಿ ಇಡಲಾಗಿದ್ದು,ಸ್ಥಳೀಯ ಪರಿಸರಕ್ಕೆ ಒಗ್ಗಿದ ನಂತರ ವಾರದೊಳಗಾಗಿ ಸಾರ್ವಜನಿಕ ವೀಕ್ಷಣೆಗೆ ಬಿಡಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ.ಭಂಡಾರಿ ತಿಳಿಸಿದ್ದಾರೆ.
ಗುಜರಾತಿನ ರಾಜಕೋಟ್ ಮೃಗಾಲಯದಿಂದ ಏಷ್ಯಾಟಿಕ್ ಸಿಂಹ, ಭಾರತೀಯ ತೋಳಗಳು ಮತ್ತು ಕೆಲವು ಅಪರೂಪದ ಪಕ್ಷಿಗಳನ್ನು, ಮಹರಾಷ್ಟ್ರದ ಗೋರೆವಾದ ಮೃಗಾಲಯದಿಂದ ಬಿಳಿ ಕೃಷ್ಣಮೃಗಗಳು ಮತ್ತು ಕರಡಿಗಳನ್ನು ಹಾಗೂ ಓಡಿಶದ ನಂದನಕಾನನ ಮೃಗಾಲಯದಿಂದ ಅಪರೂಪದ ಹೋಗ್ ಜಿಂಕೆ, ನೀಲಗಾಯಿಗಳು ಮತ್ತು ಪಕ್ಷಿಗಳನ್ನು ಪ್ರಾಣಿವಿನಿಮಯ ಯೋಜನೆಯಡಿಯಲ್ಲಿ ತರಿಸಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಶೀಘ್ರದಲ್ಲೆ ಕೇಂದ್ರ ಮೃಗಾಲಯ ಪ್ರಾಧಿಕಾರದ ಒಪ್ಪಿಗೆ ದೊರಕಿದೊಡನೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಎಚ್.ಜೆ.ಭಂಡಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!