February 20, 2026
Friday, February 20, 2026
spot_img

ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ಗೆ ಹೊಸ ಮಾರ್ಗಸೂಚಿ: ಈ ಚಟುವಟಿಕೆ ಮಾಡುವಂತಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ಸರ್ಕಾರ ಲಾಲ್‌ಬಾಗ್ ಸಸ್ಯೋದ್ಯಾನವನದ ವ್ಯಾಪಕ ಸಸ್ಯ ಸಂಗ್ರಹವನ್ನು ರಕ್ಷಿಸಲು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ನಿಯಮದಡಿಯಲ್ಲಿ ದಿನನಿತ್ಯ ನಡೆಯುತ್ತಿದ್ದ ಹಲವಾರು ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದ್ದು, ನಿಷೇಧಿತ ಚಟುವಟಿಕೆಗಳಲ್ಲಿ ತೊಡಗುವವರಿಗೆ 500 ರೂ. ವರೆಗಿನ ದಂಡವೂ ಬೀಳಲಿದೆ.

ಕಳೆದ ವಾರ ಬಿಡುಗಡೆಯಾದ ಅಧಿಸೂಚನೆಯಲ್ಲಿ ಲಾಲ್‌ಬಾಗ್‌ನ ಶ್ರೀಮಂತ ಸಸ್ಯ ವೈವಿಧ್ಯತೆಯನ್ನು ಸಂರಕ್ಷಿಸಲು ಮತ್ತು ಶಿಸ್ತು ಕಾಪಾಡಲು ಸರ್ಕಾರವು ಗುಂಪು ಯೋಗ, ಮರಗಳನ್ನು ಹತ್ತುವುದು, ಹೂವುಗಳನ್ನು ಕೀಳುವುದು ಸೇರಿ 33 ಚಟುವಟಿಕೆಗಳನ್ನು ನಿಷೇಧಿಸಿದ್ದು, ಉದ್ಯಾನವನದಲ್ಲಿ ಹೊಸ ನಿಯಮಗಳನ್ನೊಳಗೊಂಡ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆ.

ಲಾಲ್​ಬಾಗ್​ನ ಆವರಣದೊಳಗೆ ಹೊರಗಿನ ಆಹಾರವನ್ನು ತರುವುದು ಅಥವಾ ಸೇವಿಸುವುದನ್ನು ನಿಷೇಧಿಸಲಾಗಿದೆ. ಫಿಟ್‌ನೆಸ್ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಾದ ವಾಕಥಾನ್‌ಗಳು, ಮ್ಯಾರಥಾನ್‌ಗಳು, ಸೈಕ್ಲಿಂಗ್ ಮತ್ತು ಸ್ಕೇಟಿಂಗ್‌ಗಳಿಗೆ ಅನುಮತಿಯಿರುವುದಿಲ್ಲ. ಅದರೊಂದಿಗೆ ಭಿಕ್ಷೆ ಬೇಡುವುದು, ಲಂಚ ಸಂಗ್ರಹಿಸುವುದು ಮತ್ತು ಭವಿಷ್ಯ ಹೇಳುವುದು ಇಂತಹ ಚಟುವಟಿಕೆಗಳನ್ನು ಬ್ಯಾನ್ ಮಾಡಲಾಗಿದೆ.

ಉದ್ಯಾನದ ಒಳಗೆ ಸಾಕುಪ್ರಾಣಿಗಳಿಗೆ ಅನುಮತಿಯಿರುವುದಿಲ್ಲ. ಯೋಗ, ಸಭೆಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಪತ್ರಿಕಾಗೋಷ್ಠಿಗಳಂತಹ ಗುಂಪು ಚಟುವಟಿಕೆಗಳನ್ನು ಸಹ ನಿಷೇಧಿಸಲಾಗಿದ್ದು, ಹುಟ್ಟುಹಬ್ಬದ ಪಾರ್ಟಿಗಳು ಸೇರಿದಂತೆ ವೈಯಕ್ತಿಕ ಆಚರಣೆಗಳನ್ನು ನಿಷೇಧಿಸಲಾಗಿದೆ.

ಲಾಲ್​ಬಾಗ್​ನ ವ್ಯಾಪಕ ಸಸ್ಯ ಸಂಗ್ರಹವನ್ನು ರಕ್ಷಿಸಲು ಉದ್ಯಾನದಲ್ಲಿರುವ ಮರಗಳನ್ನು ಹತ್ತುವುದು, ಹೂವುಗಳನ್ನು ಕೀಳುವುದು ಅಥವಾ ಕೊಂಬೆಗಳೊಂದಿಗೆ ಆಟವಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೆ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ರೀಲ್‌ಗಳ ಚಿತ್ರೀಕರಣ, ಮಾಡೆಲಿಂಗ್, ಮದುವೆಗಳು, ಬೇಬಿ ಶವರ್‌ಗಳು ಮತ್ತು ಇತರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಮುಖ್ಯವಾಗಿ ಸಂದರ್ಭಗಳಲ್ಲಿ ಡ್ರೋನ್ ಛಾಯಾಗ್ರಹಣಕ್ಕೆ ಅವಕಾಶವಿರುವುದಿಲ್ಲ.

ಉದ್ಯಾನದೊಳಗೆ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದ್ದು, ಸಂದರ್ಶಕರು ಧ್ವನಿ ವ್ಯವಸ್ಥೆಗಳು ಅಥವಾ ಸಂಗೀತ ವಾದ್ಯಗಳನ್ನು ಬಳಸುವಂತಿಲ್ಲ ಎಂದು ಹೇಳಲಾಗಿದೆ. ಜೊತೆಗೆ ಆವರಣದೊಳಗೆ ಮದ್ಯಪಾನ ಅಥವಾ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !