April 19, 2026
Sunday, April 19, 2026
spot_img

ಕೊಡಗು ಜಿಲ್ಲೆಯಲ್ಲಿ ಬಿರುಗಾಳಿ ಮಳೆ: ಭಾಗಮಂಡಲ– ತಲಕಾವೇರಿ ರಸ್ತೆಗೆ ಉರುಳಿದ ಮರ

ಹೊಸದಿಗಂತ ವರದಿ, ಮಡಿಕೇರಿ :

ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಶನಿವಾರ ಗುಡುಗು, ಗಾಳಿ ಸಹಿತ ಸಾಧಾರಣ ಮಳೆಯಾಗಿದೆ.

ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ಚೆಟ್ಟಳ್ಳಿ, ಮೂರ್ನಾಡು, ಭಾಗಮಂಡಲ ಮತ್ತು ದಕ್ಷಿಣ ಕೊಡಗಿನ ಇರ್ಪು, ಶ್ರೀಮಂಗಲ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಕುಶಾಲನಗರ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯೂ ದಾಖಲಾಗಿದೆ.

ಅವಾಂತರ : ಗಾಳಿ ಸಹಿತ ಸುರಿದ ಮಳೆಗೆ ಭಾಗಮಂಡಲ – ತಲಕಾವೇರಿ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದು ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಇದಲ್ಲದೆ ಕೆಲವು ಕಡೆ ಬಿರುಗಾಳಿಗೆ ಮರಗಳು ಧರೆಗುರುಳಿ, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದು ಹಾನಿಯಾಗಿರುವ ಕುರಿತು ವರದಿಯಾಗಿದೆ.

ಸುಂಟಿಕೊಪ್ಪದ ಶ್ರೀರಾಮ ಎಸ್ಟೇಟ್‌’ನಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದ ಪರಿಣಾಮ ಹೊತ್ತಿ ಉರಿದಿದೆ. ಕುಶಾಲನಗರದ ಪೂರ್ಣಶ್ರೀ ಇಂಟೀರಿಯರ್ಸ್ ಬಳಿ ತೆಂಗಿನ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಕೆಲಕಾಲ ಸಂಚಾರ ವ್ಯತ್ಯಯಗೊಂಡಿತು.

ಮಾ.28 ರಿಂದ ಮುಂದಿನ 4-5 ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ಮಳೆಯಾಗಿರುವುದರಿಂದ ಕಾಫಿ ಬೆಳೆಗಾರರಲ್ಲಿ ಸಂತಸವಿದ್ದರೂ, ಮರಗಳು ಬಿದ್ದು ಹಾನಿಯಾಗುವ ಭೀತಿ ಎದುರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !