ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನ ಅತ್ಯಂತ ಮಾರಕ ಕಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್, ಮಾನವಕುಲದ ಮುಂದೆ ದೊಡ್ಡ ಸವಾಲಾಗಿ ನಿಂತಿದೆ. ವಿಶೇಷವಾಗಿ ಕಾಲನ್ ಅಥವಾ ಕರುಳಿನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ರಷ್ಯಾದ ವಿಜ್ಞಾನಿಗಳು ಈ ರೋಗದ ವಿರುದ್ಧ ಮಹತ್ವದ ಸಾಧನೆ ಮಾಡಿದ್ದಾರೆ. “ಎಂಟೆರೋಮಿಕ್ಸ್” (EnteroMix) ಹೆಸರಿನ ಲಸಿಕೆಯನ್ನು ಅವರು ಅಭಿವೃದ್ಧಿಪಡಿಸಿದ್ದು, ಎಲ್ಲಾ ಪ್ರೀಕ್ಲಿನಿಕಲ್ ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಿವೆ ಎಂದು ವರದಿಗಳು ತಿಳಿಸಿವೆ.
ಸಾಮಾನ್ಯವಾಗಿ ಕ್ಯಾನ್ಸರ್ ಪ್ರಾಥಮಿಕ ಹಂತದಲ್ಲಿದ್ದಾಗ ಚಿಕಿತ್ಸೆ ಸಾಧ್ಯವಿರುತ್ತದೆ. ಆದರೆ ಕೆಮೋಥೆರಪಿ ಅಥವಾ ರೇಡಿಯೇಶನ್ ಪ್ರಕ್ರಿಯೆಗಳು ದುಬಾರಿ ಮತ್ತು ರೋಗಿಗಳಿಗೆ ಅತಿಯಾದ ತೊಂದರೆ ಉಂಟುಮಾಡುತ್ತವೆ. ಇದರಿಂದ ಶಾಶ್ವತ ಗುಣಮುಖವಾಗುವ ಭರವಸೆ ನೀಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಲಸಿಕೆ ಪ್ರಯೋಗವು ವಿಜ್ಞಾನ ಕ್ಷೇತ್ರದಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದೆ.
ಎಂಟೆರೋಮಿಕ್ಸ್ ಲಸಿಕೆ ಅಪಾಯಕಾರಿಯಲ್ಲದ ನಾಲ್ಕು ವಿಭಿನ್ನ ವೈರಸ್‌ಗಳ ಸಂಯೋಜನೆಯಾಗಿದ್ದು, ಅವು ಕ್ಯಾನ್ಸರ್ ಕೋಶಗಳನ್ನು ನಾಶಮಾಡುವಲ್ಲಿ ನೆರವಾಗುತ್ತವೆ. ಜೊತೆಗೆ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಪ್ರಾಥಮಿಕ ಹಂತದಲ್ಲಿ ಯಶಸ್ವಿ ಫಲಿತಾಂಶ ತೋರಿಸಿರುವ ಈ ಲಸಿಕೆ ಈಗ ಮನುಷ್ಯರ ಮೇಲೆ ಪ್ರಯೋಗ ಹಂತಕ್ಕೆ ಪ್ರವೇಶಿಸಿದೆ.
ವಿಜ್ಞಾನಿಗಳ ಹಲವು ವರ್ಷಗಳ ಪರಿಶ್ರಮದಿಂದ ರೂಪುಗೊಂಡ ಈ ಲಸಿಕೆ ಮನುಷ್ಯರ ಮೇಲೂ ಪರಿಣಾಮಕಾರಿಯಾಗಿದೆ ಎಂದು ಸಾಬೀತಾದರೆ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದು ನಿಜಕ್ಕೂ ಗೇಮ್ ಚೇಂಜರ್ ಆಗಿ ಹೊರಹೊಮ್ಮಲಿದೆ.