ಹೊಸದಿಗಂತ ಡಿಜಿಟಲ್ ಡೆಸ್ಕ್:
ʼಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ವೇಳೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ತನ್ನ ಭಯೋತ್ಪಾದಕ ಶಿಬಿರ ಸಾಕಷ್ಟು ಹಾನಿಗೊಳಗಾಗಿದೆ ಎಂದು ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಈಗಾಗಲೇ ಒಪ್ಪಿಕೊಂಡಿದ್ದು, ಇದು ಉಗ್ರ ಪೋಷಕ ಪಾಕ್‌ನ ಬಣ್ಣ ಬಯಲು ಮಾಡಿದೆ ಎಂದು ಪ್ರಧಾನಿ ಮೋದಿ ಗುಡುಗಿದರು.
75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಧ್ಯ ಪ್ರದೇಶದ ಧಾರ್‌ನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇದು ಹೊಸ ಭಾರತ. ಯಾವುದೇ ದುಷ್ಟ ಶಕ್ತಿಗೆ ಹೆದರುವುದಿಲ್ಲ. ಭಾರತೀಯ ಸೇನೆ ಶತ್ರುಗಳ ಮನೆಗೆ ನುಗ್ಗಿ ಅವರನ್ನು ಹೊಡೆದುರುಳಿಸಿವ ಸಾಮರ್ಥ್ಯ ಹೊಂದಿದೆ. ಹೊಸ ಭಾರತ ಪರಮಾಣು ಬೆದರಿಕೆಗೆ ಹೆದರುವುದಿಲ್ಲಎಂದು ಗುಡುಗಿದರು.
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಈ ಹಿಂದೆ ಹಾಕಿದ್ದ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಬೆದರಿಕೆಯನ್ನು ಉಲ್ಲೇಖಿಸಿ ಮೋದಿ ಈ ಹೇಳಿಕೆ ನೀಡಿದರು. ಈ ಹಿಂದೆ ಅಸಿಮ್ ಮುನೀರ್, ಭಾರತದೊಂದಿಗೆ ನಡೆಯುವ ಭವಿಷ್ಯದ ಯುದ್ಧದಲ್ಲಿ ಇಸ್ಲಾಮಾಬಾದ್ ಅಸ್ತಿತ್ವಕ್ಕೆ ಬೆದರಿಕೆ ಉಂಟಾದರೆ ಅರ್ಧ ಪ್ರಪಂಚವನ್ನು ನಾಶಮಾಡುವುದಾಗಿ ಹೇಳಿದ್ದರು.
‘ಆಪರೇಷನ್ ಸಿಂದೂರ್ ಸಮಯದಲ್ಲಿ ನಾವು ಭಯೋತ್ಪಾದಕರ ತಾಣಗಳನ್ನು ನಾಶಪಡಿಸಿದ್ದೇವೆ. ಜೈಶ್ ಭಯೋತ್ಪಾದಕರು ಪಾಕಿಸ್ತಾನದ ಬೆಂಬಲವನ್ನು ಬಹಿರಂಗಪಡಿಸಿದ್ದಾರೆ’ ಎಂದರು.
ಮಧ್ಯ ಪ್ರದೇಶದ ಧಾರ್ ಜಿಲ್ಲೆಯಲ್ಲಿ ದೇಶದ ಮೊದಲ ಪ್ರಧಾನ ಮಂತ್ರಿ ಮೆಗಾ ಇಂಟಿಗ್ರೇಟೆಡ್ ಜವಳಿ ಪ್ರದೇಶ ಮತ್ತು ಉಡುಪು (PM MITRA) ಉದ್ಯಾನವನಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಜತೆಗೆ ‘ಸ್ವಸ್ಥ ನಾರಿ ಸಶಕ್ತ ಪರಿವಾರ್’ ಮತ್ತು ‘ರಾಷ್ಟ್ರೀಯ ಪೋಷಣ್ ಮಾಹ್’ ಅಭಿಯಾನಗಳಿಗೂ ಚಾಲನೆ ನೀಡಿದರು.