ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಗ್ರಾಮೀಣ ಉದ್ಯೋಗ ವ್ಯವಸ್ಥೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಲೋಕಸಭೆಯಲ್ಲಿ ಕೇಂದ್ರ ಸರ್ಕಾರವು ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’ ಅಂದರೆ VB-G RAM G ಮಸೂದೆ–2025 ಅನ್ನು ಅಂಗೀಕರಿಸಿದೆ. ಈ ಮೂಲಕ ಕಳೆದ ಎರಡು ದಶಕಗಳಿಂದ ಗ್ರಾಮೀಣ ಬಡವರ ಆಧಾರವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA)ಗೆ ಹೊಸ ರೂಪ ನೀಡಲಾಗಿದೆ.
ಮಸೂದೆ ಅಂಗೀಕಾರದ ವೇಳೆ ಸದನದಲ್ಲಿ ಭಾರಿ ಗದ್ದಲ ಉಂಟಾಯಿತು. ಮಹಾತ್ಮ ಗಾಂಧಿಯವರ ಹೆಸರನ್ನು ಯೋಜನೆಯಿಂದ ಕೈಬಿಟ್ಟಿರುವುದನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದವು. ಇದು ಗಾಂಧೀಜಿಗೆ ಅವಮಾನವಾಗಿದ್ದು, ಗ್ರಾಮೀಣ ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಘೋಷಣೆ ಕೂಗಿದ್ದು, ಮಸೂದೆಯ ಪ್ರತಿಗಳನ್ನು ಹರಿದು ಪ್ರತಿಭಟನೆ ನಡೆಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, 2009ರ ಚುನಾವಣೆ ಹಿನ್ನೆಲೆ ಮಹಾತ್ಮ ಗಾಂಧಿಯವರ ಹೆಸರನ್ನು ಯೋಜನೆಗೆ ಸೇರಿಸಲಾಗಿತ್ತು ಎಂದು ಸಮರ್ಥಿಸಿಕೊಂಡರು. ಯೋಜನೆಯ ಉದ್ದೇಶ ಮತ್ತು ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ಕಾಯ್ದೆಯನ್ನು ತರಲಾಗಿದೆ ಎಂದು ಅವರು ತಿಳಿಸಿದರು.
ಹೊಸ VB-G RAM G ಮಸೂದೆಯಡಿ ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 125 ದಿನಗಳ ಉದ್ಯೋಗ ಭರವಸೆ ನೀಡಲು ಸರ್ಕಾರ ಮುಂದಾಗಿದೆ. ಜಲ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಮತ್ತು ಹವಾಮಾನ ವೈಪರೀತ್ಯ ತಡೆಗೆ ಸಂಬಂಧಿಸಿದ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತದೆ. ಕೃಷಿ ಹಂಗಾಮಿನಲ್ಲಿ ಕಾರ್ಮಿಕರ ಕೊರತೆ ಆಗದಂತೆ, ಗರಿಷ್ಠ 60 ದಿನಗಳವರೆಗೆ ಯೋಜನೆ ಸ್ಥಗಿತಗೊಳಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ. ಜೊತೆಗೆ ವರ್ಷಕ್ಕೆ ಹೆಚ್ಚುವರಿ 25 ದಿನಗಳ ಕೆಲಸ ಸಿಗುವುದರಿಂದ, ಪ್ರತಿ ಕುಟುಂಬದ ವಾರ್ಷಿಕ ಆದಾಯದಲ್ಲಿ ಏರಿಕೆಯಾಗಲಿದೆ. ಈ ಯೋಜನೆಯಲ್ಲೂ ಮಹಿಳೆಯರಿಗೆ ಆದ್ಯತೆ ಮುಂದುವರೆಯಲಿದ್ದು, ಮನೆಯ ಹತ್ತಿರವೇ ಉದ್ಯೋಗ ದೊರೆಯಲಿದೆ.

